ಮಂಗಳೂರು: ಮಾರ್ಗಸೂಚಿ ಪಾಲಿಸಿ ಗಣೇಶೋತ್ಸವ ಆಚರಿಸಿ; ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರ ಮನವಿ

Update: 2020-08-21 09:39 GMT

ಮಂಗಳೂರು, ಆ.21: ಗಣೇಶೋತ್ಸವ ಸಂಭ್ರಮ ಆರಂಭವಾಗಿದ್ದು, ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಸಂಪೂರ್ಣ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರು ಈಗಾಗಲೇ ಗಣೇಶೋತ್ಸವಕ್ಕೆ ಸಂಬಂಧಿಸಿ ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಗಣೇಶೋತ್ಸವ ಆಚರಿಸಬೇಕು ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ಮನವಿ ಮಾಡಿದ್ದಾರೆ.

ಕೋವಿಡ್‌ನ ಈ ಸಂದರ್ಭದಲ್ಲಿ ಜನರು ಈ ರೋಗದ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಲಾಖೆಯಿಂದ ಬಂದೋಬಸ್ತ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಪಿ, ಸಿಎಆರ್, ಆರ್‌ಎಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಡಿಸಿಪಿ ನೇತೃತ್ವದಲ್ಲಿ ಈಗಾಗಲೇ ರೂಟ್ ಮಾರ್ಚ್‌ಗಳನ್ನು ನಡೆಸಲಾಗುತ್ತಿದೆ. ಉಳ್ಳಾಲದಲ್ಲಿ ನಿನ್ನೆ ನಡೆದಿದ್ದು, ಸುರತ್ಕಲ್‌ನಲ್ಲಿಯೂ ನಡೆಸಲಾಗುವುದು. ಆಚರಣೆಯನ್ನು ಶಾಂತವಾಗಿ, ಸುರಕ್ಷಿತವಾಗಿ ಆಚರಿಸುವ ನಿಟ್ಟಿನಲ್ಲಿ ಈಗಾಗಲೇ ಗಣ್ಯ ವಕ್ತಿಗಳ ಶಾಂತಿ ಸಭೆಯನ್ನು ಮಾಡಲಾಗಿದೆ. ಬೀಟ್ ಮಟ್ಟದಿಂದ ಪೊಲೀಸ್ ಆಯುಕ್ತಾಲಯದವರೆಗಿನ ಸಂಪರ್ಕ ಸಂಖ್ಯೆಗಳಿಗೆ ಯಾವುದೇ ಸಮಸ್ಯೆ, ಅನುಮಾನಗಳಿಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ. ಜಿಲ್ಲಾ ಪೊಲೀಸರ ಸಹಭಾಗಿತ್ವದೊಂದಿಗೆ ನಗರ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದರು.

ಪ್ಲಾಸ್ಮಾ ದಾನಕ್ಕೆ ಪೊಲೀಸ್ ಸಿಬ್ಬಂದಿ ಸಿದ್ಧ

ಕೊರೋನ ನಿಯಂತ್ರಣದ ಹಿನ್ನೆಲೆಯಲ್ಲಿ ಪ್ಲಾಸ್ಮಾ ಥೆರಪಿ ಬಹುಮುಖ್ಯ ಪಾತ್ರ ವಹಿಸುತ್ತಿರುವುದರಿಂದ ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ಲಾಸ್ಮಾ ದಾನಕ್ಕೆ ಮುಂದೆ ಬಂದಿದ್ದಾರೆ. ಪ್ಲಾಸ್ಮಾ ಸಂಗ್ರಹ ಆರಂಭವಾದಾಗ ಆಸಕ್ತ ಪೊಲೀಸರಿಂದ ಪ್ಲಾಸ್ಮಾ ದಾನಕ್ಕೆ ಕ್ರಮ ವಹಿಸಲಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News