ಆನ್ ಲೈನ್ ಶಿಕ್ಷಣ : ಹಣ ಸಂಗ್ರಹಿಸಿ ಮೊಬೈಲ್ ಖರೀದಿಸಿ ಬಡ ವಿದ್ಯಾರ್ಥಿಗಳಿಗೆ ನೀಡಿದ ಮೂವರು ವಿದ್ಯಾರ್ಥಿನಿಯರು
ಉಡುಪಿ, ಆ.21: ಕಳೆದ ಆರು ತಿಂಗಳುಗಳಿಂದ ದೇಶಾದ್ಯಂತ ವ್ಯಾಪಿಸಿರುವ ಕೊರೋನದಿಂದಾಗಿ ಸ್ಮಾರ್ಟ್‌ಫೋನ್ ಇಂದು ವಿವಿಧ ಕಾರಣಗಳಿಗಾಗಿ ಎಲ್ಲರಿಗೂ ಅನಿವಾರ್ಯ ವಸ್ತುವಾಗಿ ಬಿಟ್ಟಿದೆ. ಕೊರೋನ ಸೋಂಕಿತರು, ಅವರ ಸಂಪರ್ಕಿತರು ಸೇರಿದಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಸಹ.
ಮಾರ್ಚ್‌ಗೆ ಮೊದಲು ಶಾಲಾ-ಕಾಲೇಜುಗಳ ನೋಟೀಸು ಬೋರ್ಡ್‌ಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸಂಸ್ಥೆಯ ಆವರಣಗಳಲ್ಲಿ ‘ಮೊಬೈಲ್, ಸ್ಮಾರ್ಟ್ ಫೋನ್’ ಹೊಂದಿರುವ ಬಗ್ಗೆ ಎಚ್ಚರಿಕೆಯ ಸಂದೇಶಗಳು ಸಾಮಾನ್ಯವಾಗಿದ್ದವು. ಆದರೆ ಇಂದು ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜು, ವಿವಿಗಳವರೆಗೆ ಇದರ ಅನಿವಾರ್ಯತೆ ಬಗ್ಗೆ ಯಾರಿಗೂ ಆಕ್ಷೇಪಗಳೇ ಇಲ್ಲದಂತಾಗಿದೆ. ಇವೆಲ್ಲವೂ ಕೊರೋನ ಮಹಿಮೆ ಎನ್ನಬಹುದು.
ಕೊರೋನ ವೈರಸ್‌ನಿಂದಾಗಿ ಕಳೆದ ಮಾರ್ಚ್ ತಿಂಗಳ ನಂತರ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳತ್ತ ತಲೆ ಎತ್ತಿಯೂ ನೋಡುವಂತಿಲ್ಲ. ಆದರೆ ಅವರ ಶಿಕ್ಷಣ ಮುಂದುವರಿಕೆಯ ಕುರಿತಂತೆ ಚಿಂತಿತರಾಗಿರುವ ಅವರ ಪೋಷಕರು, ಶಿಕ್ಷಕ-ಪ್ರಾಧ್ಯಾಪಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನಮ್ಮ ರಾಜ್ಯ ಸರಕಾರ ಇದೀಗ ‘ಆನ್‌ಲೈನ್ ಶಿಕ್ಷಣ’ವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತಾಗಿದೆ.
ನಮ್ಮ ಸರಕಾರ, ಶಿಕ್ಷಣ ಸಚಿವರು ಹಾಗೂ ಇಲಾಖೆ ‘ಆನ್‌ಲೈನ್ ಶಿಕ್ಷಣ’ವನ್ನು ಪ್ರಾಥಮಿಕ ತರಗತಿಯಿಂದ ಅನಿವಾರ್ಯಗೊಳಿಸಿದರೂ, ಇದು ಸಮಾಜದ ಎಲ್ಲಾ ವರ್ಗದ ಮಕ್ಕಳಿಗೂ ಸಿಗುವಂತೆ ನೋಡಿಕೊಳ್ಳುವಲ್ಲಿ ಮಾತ್ರ ವಿಫಲವಾಗಿವೆ. ಇಂಟರ್‌ನೆಟ್ ಸಂಪರ್ಕ ಹಾಗೂ ಸ್ಮಾರ್ಟ್ ಫೋನ್ ಇರುವ ಒಂದು ವರ್ಗ ಆನ್‌ಲೈನ್ ಶಿಕ್ಷಣವನ್ನು ತುಂಬು ಮನಸ್ಸಿನಿಂದ ಒಪ್ಪಿಕೊಂಡಿದ್ದರೆ, ದೂರಸಂಪರ್ಕ ವ್ಯವಸ್ಥೆ, ಇಂಟರ್‌ನೆಟ್ ಸಂಪರ್ಕ, ಮೊಬೈಲ್ (ಸ್ಮಾರ್ಟ್ ಫೋನ್) ಇನ್ನೂ ತಲುಪದ ಬಹುಸಂಖ್ಯಾತ ಜನರ ಕುರಿತಂತೆ, ಅವರ ಮಕ್ಕಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ ಇಂಥವರಲ್ಲಿ ಯಾವುದೇ ತಪ್ಪಿತಸ್ಥ ಭಾವನೆಯ ಸಣ್ಣ ಕುರುಹು ಇಲ್ಲದಿರುವುದು ಸಮಾಜ ಇಂದು ಸಾಗಿರುವ ದಿಕ್ಕಿನತ್ತ ಮತ್ತೊಮ್ಮೆ ಚಿಂತಿಸುವಂತೆ ಮಾಡುತ್ತಿದೆ.
ಶಿಕ್ಷಣ ಎಂಬುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಹಕ್ಕು. ಆದರೆ ರಾಜ್ಯದ ಲಕ್ಷ ಲಕ್ಷ ಮಕ್ಕಳು ಯಾವೊಂದು ಸೌಲಭ್ಯಗಳನ್ನು ಹೊಂದಿಲ್ಲದೇ, ಈಗ ಆನ್‌ಲೈನ್ ಶಿಕ್ಷಣದ ಭಾಗವಾಗಿ ಹೋಗಿದ್ದಾರೆ. ದೂರ ಸಂಪರ್ಕ ವ್ಯವಸ್ಥೆಯೂ ಇಲ್ಲದ ಎಷ್ಟೊಂದು ಹಳ್ಳಿಗಳಲ್ಲಿರುವ ಮಕ್ಕಳ ಶೈಕ್ಷಣಿಕ ಬದುಕಿನ ಬಗ್ಗೆ ನಮ್ಮ ರಾಜಕಾರಣಿಗಳು ಗಂಭೀರವಾಗಿ ಚಿಂತನೆಯನ್ನೇ ನಡೆಸಿಲ್ಲ ಎಂಬುದೇ ಉಳ್ಳವರು ಹಾಗೂ ಇಲ್ಲದವರ ಮಧ್ಯೆ ಸರಕಾರದ ಧೋರಣೆಯನ್ನು ಎತ್ತಿ ತೋರಿಸುತ್ತದೆ.
ಕತ್ತಲಲ್ಲಿ ಗೋಚರಿಸುವ ಹೊಂಗಿರಣ: ರಾಜ್ಯದಲ್ಲಿ ಈಗ ಆನ್‌ಲೈನ್ ಶಿಕ್ಷಣವನ್ನು ಎಲ್ಲರಿಗೂ ಒಪ್ಪಿಕೊಂಡಿದ್ದಾರೆ. ಆದರೆ ಇದರಿಂದ ವಂಚಿತರಾಗು ತ್ತಿರುವ ಗ್ರಾಮೀಣ ಭಾಗಗಳ, ಬಡಕುಟುಂಬ ಮಕ್ಕಳ ಬಗ್ಗೆ ಶಿಕ್ಷಣ ಸಚಿವರು, ಇಲಾಖೆ ಸೇರಿದಂತೆ ಯಾರೂ ಗಂಭೀರ ಚಿಂತನೆಯನ್ನು ಮಾಡುತ್ತಿಲ್ಲ ಎಂಬ ದೂರಿನ ನಡುವೆಯೂ, ಉಡುಪಿಯ ಮೂವರು ವಿದ್ಯಾರ್ಥಿನಿಯರು ಸ್ವಯಂ ಪ್ರೇರಣೆಯಿಂದ ಮೊಬೈಲ್ ಫೋನ್ ಖರೀದಿಸುವ ಸಾಮರ್ಥ್ಯವಿಲ್ಲದೆ ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡ ವಿದ್ಯಾರ್ಥಿಗಳಿಗೆ ದಾನಿಗಳಿಂದ ಹಳೆಯ ಮೊಬೈಲ್ ಫೋನ್‌ಗಳನ್ನು ಪಡೆದು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ವಿತರಿಸುವ ಯೋಜನೆಯೊಂದನ್ನು ಕಾರ್ಯಗತಗೊಳಿಸಿ ಅನುಷ್ಠಾನಕ್ಕೆ ತಂದಿರು ವುದು ಒಂದರ್ಥದಲ್ಲಿ ಕಗ್ಗತ್ತಲ ಮಧ್ಯದಲ್ಲಿ ಕಾಣಿಸುವ ಹೊಂಗಿರಣದಂತೆ ಭಾಸವಾಗುತ್ತಿದೆ.
12ನೇ ತರಗತಿಯಲ್ಲಿ ಕಲಿಯುತ್ತಿರುವ ಮೂವರು ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿನಿ ಸ್ನೇಹಿತೆಯರು-ಅದಿತಿ ಎಂ.ಕಾಮತ್, ಅವ್ನಿ ಎಸ್.ಶೆಟ್ಟಿ ಹಾಗೂ ಕೇಕಿ ಎಂ.ತಲ್ಲೂರು- ಹಳೆ ಮೊಬೈಲ್‌ಗಳನ್ನು ಸಂಗ್ರಹಿಸಿ, ಆವಶ್ಯಕತೆ ಇರುವ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ನೀಡುವ ಯೋಜನೆ ಇದೀಗ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ.
‘ಸುಲಿತ್’ ತಂಡದ ಮೂಲಕ ಹಳೆಯ ಮೊಬೈಲ್‌ಗಳನ್ನು ಸಂಗ್ರಹಿಸಲು ಹೊರಟ ಇವರಿಗೆ ಇದರಲ್ಲಿ ನಿರೀಕ್ಷಿತ ಯಶಸ್ಸಿ ಸಿಗಲಿಲ್ಲ. ಸಿಕ್ಕ ಪೋನ್ ಗಳಿಗಿಂತ ‘ಪೋನ್ ಕೊಡಿ’ ಎಂಬ ಬೇಡಿಕೆಯೇ ಹೆಚ್ಚಾಗಿದ್ದರಿಂದ ಇವರು ತಮ್ಮ ಯೋಜನೆಯ ರೂಪುರೇಷೆಯನ್ನು ಬದಲಾಯಿಸಿ, ತಮ್ಮ ಕುಟುಂಬ-ಮಿತ್ರರು, ಸಹೃದಯಿಗಳಿಂದ ಇದಕ್ಕಾಗಿ ಹಣ ಸಂಗ್ರಹಿಸಿದರು. ಸಾಮಾಜಿಕ ಜಾಲತಾಣ ದಲ್ಲಿ ಇವರು ಮಾಡಿಕೊಂಡ ಮನವಿಗೆ ಸಾಕಷ್ಟು ಮಂದಿ ಸ್ಪಂಧಿಸಿದ್ದಾರೆ. ಇದರಿಂದ ಒಟ್ಟಾದ ದೊಡ್ಡ ಮೊತ್ತದಿಂದ ಹೊಸದಾದ ಸ್ಮಾರ್ಟ್‌ಫೋನ್‌ಗಳನ್ನು ಸಗಟಾಗಿ ಖರೀದಿಸಿ ವಿತರಿಸಲು ನಿರ್ಧರಿಸಿದರು.
10 ಮಕ್ಕಳಿಗೆ ಸ್ಮಾರ್ಟ್‌ಫೋನ್: ಇದೀಗ ಈ ಮೂವರು ಸಂಗ್ರಹವಾದ ಮೊತ್ತದಿಂದ ಖರೀದಿಸಿದ ಹೊಚ್ಚಹೊಸ ಮೊಬೈಲ್‌ಗಳನ್ನು ಮೊದಲ ಹಂತದಲ್ಲಿ ಬ್ರಹ್ಮಾವರ ಸಮೀಪದ ಚೇರ್ಕಾಡಿ ಎಂಬ ಗ್ರಾಮೀಣ ಪ್ರದೇಶದ ಶಾರದಾ ಪ್ರೌಢ ಶಾಲೆಯ 10 ಮಂದಿ ಬಡ ಎಸೆಸೆಲ್ಸಿ ವಿದ್ಯಾರ್ಥಿ ಗಳಿಗೆ ಗುರುವಾರ ಸಂಜೆ ಹೋಗಿ ವಿತರಿಸಿ ಬಂದಿದ್ದಾರೆ. ಅಲ್ಲದೇ ಈಗಾಗಲೇ ಸಿಕ್ಕಿದ ಹಳೆಯ ಪೋನ್‌ಗಳನ್ನು ಅವರು ಅಗತ್ಯವಿರುವ ಬಡ ಮಕ್ಕಳಿಗೆ ನೀಡಿದ್ದಾರೆ.
ಇನ್ನು ಉಳಿದಿರುವ ಹಣದಲ್ಲಿ ಮತ್ತಷ್ಟು ಮೊಬೈಲ್‌ಗಳನ್ನು ಖರೀದಿಸಿ ಅದನ್ನು ಸಹ ಅಗತ್ಯವುಳ್ಳ ಗ್ರಾಮೀಣ ಭಾಗದ ಮಕ್ಕಳಿಗೆ ನೀಡುವ ಸಂಕಲ್ಪ ಇವರದ್ದಾಗಿದೆ. ಸದ್ಯಕ್ಕೆ ಇವರ ಗುರಿ ಎಸೆಸೆಲ್ಸಿ ಮತ್ತು ಪಿಯುಸಿಗಳಲ್ಲಿ ಕಲಿಯುತ್ತಿರುವ ಮಕ್ಕಳಾಗಿದ್ದಾರೆ. ಇದಕ್ಕೆ ಅವರಿಗೆ ನಾಡಿನ ಜನರಿಗೆ ಒಳ್ಳೆಯ ಪ್ರೋತ್ಸಾಹವೂ ಸಿಗುತ್ತಿರುವ ಬಗ್ಗೆ ಹೆಮ್ಮೆ ಇದೆ. ಅನಿವಾರ್ಯತೆಯಲ್ಲಿ ಬದುಕು ಕಲಿಸಿದ ಪಾಠದಿಂದ ಪಡೆದ ಅನುಭವ ಅವರಲ್ಲಿ ಸಾರ್ಥಕ್ಯದ ಭಾವನೆಯನ್ನಂತೂ ಮೂಡಿಸಿದೆ.
ಇಂಥ ಯೋಜನೆಯೊಂದಿಗೆ ಈ ಮೂವರು ಕಿರಿಯ ವಿದ್ಯಾರ್ಥಿನಿಯರು, ಸಮಾಜದ ಹಿರಿಯರಿಗೆ, ಆಡಳಿತಗಾರರಿಗೆ ಹಾಗೂ ಶಿಕ್ಷಣ ಇಲಾಖೆಯ ಹೊಣೆ ಹೊತ್ತವರಿಗೆ ‘ತಾರತಮ್ಯ ನಿವಾರಣೆ’ಗೆ ಕೆಲವು ಪಾಠಗಳನ್ನು ಕಲಿಸಿ ‘ಮಾರ್ಗದರ್ಶಕ’ರೆನಿಸಿಕೊಂಡಿದ್ದಾರೆ.
ಶಾಲೆಯ ರಜಾಕಾಲದ ಸಾಮಾಜಿಕ ಉದ್ದೇಶದ ಕೆಲಸದ ಭಾಗವಾಗಿ ಇದನ್ನು ನಾವು ರೂಪಿಸಿದೆವು. 12ನೇ ತರಗತಿ ವಿದ್ಯಾರ್ಥಿಗಳಾಗಿ ನಾವು ಆನ್‌ಲೈನ್ ಕ್ಲಾಸ್‌ಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದೆವು. ಆದರೆ ನಮ್ಮದೇ ವಯಸ್ಸಿನ ಅದೆಷ್ಟೋ ಮಕ್ಕಳಿಗೆ ಇದಕ್ಕೆ ಬೇಕಾದ ಸೌಲಭ್ಯ ಗಳಿಲ್ಲ. ಅವರು ಆನ್‌ಲೈನ್ ಕ್ಲಾಸ್‌ಗಾಗಿ ಸ್ಮಾರ್ಟ್‌ಫೋನ್‌ಗೆ ಹೆತ್ತವರ ಮೇಲೆ ಒತ್ತಡ ಹೇರುತಿದ್ದಾರೆ ಎಂಬುದು ಪತ್ರಿಕೆಗಳಿಂದ ಗೊತ್ತಾಯಿತು. ಅಂಥ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶ ನಮ್ಮದಾಗಿತ್ತು.
''ಸದ್ಯ ಎಸೆಸೆಲ್ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಓದುವ ಬಡ ವಿದ್ಯಾರ್ಥಿ ಗಳಿಗೆ ಸಹಾಯ ಮಾಡುವ ಗುರಿ ಇದೆ. ಈಗಾಗಲೇ ಚೇರ್ಕಾಡಿ ಶಾರದಾ ಹೈಸ್ಕೂಲ್‌ನ 10 ಮಂದಿ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್ ವಿತರಿಸಿದ್ದೇವೆ. ಮುಂದೆ ಬೇರೆ ಗ್ರಾಮೀಣ ಭಾಗದ ಶಾಲೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಅವರಿಂದ ವಿವರಗಳನ್ನು ಪಡೆದು ಸಾಧ್ಯವಿದ್ದಷ್ಟು ಮಂದಿಗೆ ಹಂಚುವ ಉದ್ದೇಶವಿದೆ.
-ಕೇಕಿ ಆರ್.ತಲ್ಲೂರು, ಸುಲಿತ್ ತಂಡದ ಸದಸ್ಯೆ