ಪಂಪ್‌ವೆಲ್ ಮಸೀದಿಗೆ ಹಾನಿ : ಕಠಿಣ ಕ್ರಮಕ್ಕೆ ವಿವಿಧ ಸಂಘಟನೆಗಳ ಒತ್ತಾಯ

Update: 2020-08-22 08:31 GMT

ಮಂಗಳೂರು, ಆ. 22: ನಗರದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಭವನ, ಮಸೀದಿಗೆ ದುಷ್ಕರ್ಮಿಗಳು ಹಾನಿ ಎಸಗಿ ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ದಾರಿಮಿ ಉಲಮಾ ಒಕ್ಕೂಟ: ದ.ಕ. ಜಿಲ್ಲೆಯಲ್ಲಿ ಗಲಭೆ ಎಬ್ಬಿಸುವ ಷಡ್ಯಂತ್ರ ನಡೆಯುತ್ತಿರುವುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುವ ಅಹಿತಕರ ಘಟನೆಗಳು ಸಾಕ್ಷಿಯಾಗುತ್ತಿವೆ. ಶೂನ್ಯ ಅಭಿವೃದ್ಧಿಯನ್ನು ಮುಂದಿಟ್ಟು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾದ್ಯವಿಲ್ಲ ಎಂದು ಖಾತರಿಗೊಂಡಿರುವ ದುಷ್ಕರ್ಮಿಗಳು ಮತ್ತೆ ಚುನಾವಣೆ ಗೆಲ್ಲಲು ಈಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕಾಗಿ ಅಲ್ಲಲ್ಲಿ ಗಲಭೆ ಎಬ್ಬಿಸುವ ಷಡ್ಯಂತ್ರ ರೂಪಿಸಿದ್ದಾರೆ. ಅಲ್ಪಸಂಖ್ಯಾತ ಭವನಕ್ಕೆ ಕಲ್ಲೆಸತ, ಮಸೀದಿಗೆ ಬಾಟಲಿ ಎಸೆತ ಇತ್ಯಾದಿ ಕುಕೃತ್ಯಗಳ ಮೂಲಕ ಅಲ್ಪಸಂಖ್ಯಾತರನ್ನು ಪ್ರಚೋದಿಸಿ ಅಶಾಂತಿ ಸೃಷ್ಟಿಗೆ ಮುಂದಾಗುತ್ತಿದ್ದಾರೆ. ಪೊಲೀಸ್ ಇಲಾಖೆಯು ಕಠಿಣ ಕ್ರಮಕೈಗೊಂಡು ಇದನ್ನು ಹತ್ತಿಕ್ಕಬೇಕು ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ. ದಾರಿಮಿ ಒತ್ತಾಯಿಸಿದ್ದಾರೆ.

ಮುಸ್ಲಿ ಡೆವಲಪ್‌ಮೆಂಟ್ ಫೋರಂ: ಪಂಪ್‌ವೆಲ್‌ನ ತಕ್ವಾ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲಿ ಎಸೆದಿರುವುದು ಕರಾವಳಿಯ ಶಾಂತಿ ಯನ್ನು ಕದಡುವ ಯತ್ನವಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂರ ರಾಜ್ಯ ಉಪಾಧ್ಯಕ್ಷ ಎಸ್. ಅಬೂಬಕರ್ ಸಜಿಪ ತಿಳಿಸಿದ್ದಾರೆ. ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರು ಸೆಂಟ್ರಲ್ ಕಮಿಟಿ: ಕರಾವಳಿಯಲ್ಲಿ ಶಾಂತಿಯನ್ನು ನೆಲೆ ನಿಂತಿದೆ. ಇದರಿಂದ ಹತಾಶರಾಗಿರುವ ದುಷ್ಕರ್ಮಿಗಳು ಇದೀಗ ಮಸೀದಿ, ಅಲ್ಪಸಂಖ್ಯಾತರ ಭವನಕ್ಕೆ ಹಾನಿ ಎಸಗಿ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಕ್ರಮ ಖಂಡನೀಯ. ಪೊಲೀಸರು ದುಷ್ಕರ್ಮಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಬೇಕು. ಇದರಿಂದ ಶಾಂತಿ ಕಾಪಾಡಲು ಸಾಧ್ಯವಿದೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.

ಮುಸ್ಲಿಂ ಲೀಗ್: ಜಿಲ್ಲೆಯ ಹಲವು ಕಡೆ ಸಮಾಜದ್ರೋಹಿ ಶಕ್ತಿಗಳು ಕೋಮು ಪ್ರಚೋದಕ ಕುತಂತ್ರಗಳನ್ನು ನಿರಂತರವಾಗಿ ಮಾಡುತ್ತಿದೆ. ತಕ್ಷಣ ಜಿಲ್ಲಾಡಳಿತವು ಸೂಕ್ತ ವಾದ ಕಾನೂನು ಕ್ರಮಗಳ ಮೂಲಕ ವಿಧ್ವಂಸಕ ಶಕ್ತಿ ಗಳನ್ನು ಮಟ್ಟಹಾಕಬೇಕು ಎಂದು ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆಪಿ ಅಬ್ದುಲ್ ರಹ್ಮಾನ್ ತಬೂಕು ದಾರಿಮಿ ಕರೆ ನೀಡಿದ್ದಾರೆ.

ಮುಸ್ಲಿಂ ಜಸ್ಟೀಸ್ ಫೋರಂ: ಪಂಪ್‌ವೆಲ್ ಮಸೀದಿಗೆ ಸೋಡಾ ಬಾಟಲಿ ಎಸೆದಿರುವ ಕೃತ್ಯವನ್ನು ಖಂಡಿಸಿರುವ ಮುಸ್ಲಿಂ ಜಸ್ಟೀಸ್ ಫೋರಂನ ಪ್ರಧಾನ ಕಾರ್ಯದರ್ಶಿ ವಹ್ಹಾಬ್ ಕುದ್ರೋಳಿ, ಬೆಂಗಳೂರಿನ ಕೆ.ಜೆ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಗಲಭೆ ಬಳಿಕ ಮಂಗಳೂರಿನ ಕೆಲವು ಕಡೆ ಕೋಮುಗಲಭೆಗೆ ಪ್ರಚೋಧಿಸುವಂತ ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದರ ಹಿಂದಿರುವ ಶಕ್ತಿಯನ್ನು ಗುರುತಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News