ಆಂತರಿಕ ಭದ್ರತೆಗೆ ಆಧುನಿಕ ತಂತ್ರಜ್ಞಾನ ಬಳಕೆ: ಎಡಿಜಿಪಿ ಭಾಸ್ಕರ ರಾವ್

Update: 2020-08-25 14:31 GMT

ಉಡುಪಿ, ಆ.25: ಸಮುದ್ರ ಬಹಳಷ್ಟು ಸೂಕ್ಷ್ಮವಾದ ಸ್ಥಳವಾಗಿರುವುದರಿಂದ ದೇಶದ ಭದ್ರತೆಯ ದೃಷ್ಠಿಯಿಂದ ಸಾಕಷ್ಟು ಆಲರ್ಟ್ ಆಗಿರಬೇಕಾ ಗುತ್ತದೆ. ಈ ನಿಟ್ಟಿನಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆ ಸಹಿತ ರಾಜ್ಯದ ಆಂತರಿಕ ಭದ್ರತೆಗೆ ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಕೆ ಮಾಡಿ ಕೊಳ್ಳಲಾಗುವುದು ಎಂದು ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕೇಂದ್ರದಲ್ಲಿ ಮಂಗಳವಾರ ನಡೆದ ಮೀನುಗಾರರ ಸಂಘದ ಮುಖಂಡರೊಂದಿಗೆ ಸಂವಾದ ಕಾರ್ಯ ಕ್ರಮಕ್ಕೆ ಮುನ್ನ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಈಗಾಗಲೇ ಕರಾವಳಿ ಕಾವಲು ಪಡೆಗೆ ಮೂರು ಜೆಟ್ ಸ್ಕೀಗಳನ್ನು ಖರೀದಿಸಲಾಗಿದೆ. ಇಂಟರ್‌ಸ್ಪೆಕ್ಟರ್ ಬೋಟ್‌ಗಿಂತ ರಿಗಿಡ್ ಇನ್‌ಫ್ಲಾಟೇಬಲ್ ಬೋಟ್(ಆರ್‌ಐಬಿ) ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬೋಟುಗಳಿಂದ ಲ್ಯಾಂಡಿಂಗ್ ಪಾಯಿಂಟ್ ತಲುಪಲು ಸುಲಭವಾಗುತ್ತದೆ ಎಂದರು.

ಹೊರದೇಶದವರ ಬಗ್ಗೆ ಪರಿಶೀಲನೆ

ದೇಶದ ಭದ್ರತೆಯ ದೃಷ್ಠಿಯಿಂದ ಸಮುದ್ರ ತಟದಲ್ಲಿ ಯಾರಿದ್ದಾರೆಂಬ ಮಾಹಿತಿಗಳನ್ನು ಕಲೆಹಾಕಬೇಕಾಗಿದೆ. ಈಗ ಜಿಲ್ಲೆಯವರು ಮಾತ್ರವಲ್ಲ ಹೊರ ರಾಜ್ಯದವರು ಕೂಡ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಹೊರ ದೇಶದವರು ಇದ್ದಾರೆಯೇ ಎಂಬುದರ ಬಗ್ಗೆಯೂ ನಾವು ಪರಿಶೀಲನೆ ಮಾಡೇಕಾಗಿದೆ ಎಂದು ಅವರು ಹೇಳಿದರು.

ಸಮುದ್ರಕ್ಕೆ ಹೋದವರು ಮತ್ತು ಅಲ್ಲಿಂದ ಬಂದವರ ಲೆಕ್ಕ ಇಟ್ಟುಕೊಳ್ಳುವುದೇ ನಮ್ಮ ಮುಂದೆ ಇರುವ ದೊಡ್ಡ ಸವಾಲು ಆಗಿದೆ. ಭಯೋತ್ಪಾದ ಕರು ದೇಶ ದೊಳಗೆ ನುಸುಳುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ಕೇಂದ್ರ ಸರಕಾರ ಹೊಸ ತಂತ್ರಜ್ಞಾನವನ್ನು ಆಳವಡಿಸಿಕೊಂಡಿದೆ. ಅದು ಇನ್ನಷ್ಟೆ ಯಶಸ್ವಿಯಾಗಬೇಕಾಗಿದೆ. ಕರಾವಳಿ ಕರ್ನಾಟಕದ 43 ಬೀಚ್‌ಗಳಿಗೆ ಭದ್ರತೆ ಒದಗಿಸುವ ಕೆಲಸ ಕೂಡ ಮಾಡಲಾುವುದು ಎಂದು ಅವರು ತಿಳಿಸಿದರು.

ಪ್ರತ್ಯೇಕ ಫೋರ್ಸ್ ಅಗತ್ಯ

ಕರಾವಳಿ ಕಾವಲು ಪಡೆಗೆ ನೇಮಕ ಆಗುವ ಪೊಲೀಸರಿಗೆ ಭೂಮಿ ಮೇಲೆ ಕರ್ತವ್ಯ ನಿರ್ವಹಿಸಿ ಅಭ್ಯಾಸ ಇದೆಯೇ ಹೊರತು ಸಮುದ್ರದ ಬಗ್ಗೆ ಏನು ಗೊತ್ತಿಲ್ಲ. ಆ ಕಾರಣಕ್ಕಾಗಿ ಕರಾವಳಿ ನಿಯಂತ್ರಣ ದಳದಲ್ಲಿ 300 ಹೋಮ್ ಗಾರ್ಡ್ ಮತ್ತು ಸಾಗರ ರಕ್ಷ ದಳದಲ್ಲಿ ಒಂದು ಸಾವಿರ ಮಂದಿ ಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲ ಒಂಭತ್ತು ಠಾಣೆಯಲ್ಲೂ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

ಕರಾವಳಿ ಕಾವಲು ಪೊಲೀಸರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಸದ್ಯ ಉಡುಪಿ, ದ.ಕ., ಚಿಕ್ಕಮಗಳೂರು, ಹಾಸನ ಜಿಲ್ಲಾ ಪೊಲೀಸರನ್ನೇ ಕರಾವಳಿ ಕಾವಲು ಪಡೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಮ್ಮದೇ ಆದ ಪ್ರತ್ಯೇಕ ಪೋರ್ಸ್ ಎಂಬುದು ಇಲ್ಲ. ಸಮುದ್ರದ ಮರಳಿನ ಮೇಲೆ ಓಡುವ ಸಾಮರ್ಥ್ಯ ಇರುವ ಮತ್ತು ಈಜುವ ಕಲೆ ಗೊತ್ತಿರುವವರು ಹಾಗೂ ಆಸಕ್ತಿ ಯಿಂದ ಕೆಲಸ ಮಾಡುವ ಪಡೆ ನಮಗೆ ಅಗತ್ಯ ಇದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಆರ್ ಚೇತನ್ ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಾತ್ಮಕ ಸಂದೇಶಗಳು ಆಂತರಿಕ ಭದ್ರತೆಗೆ ಬಹಳ ದೊಡ್ಡ ಸವಾಲು ಆಗಿದೆ. ಕಿಡಿಗೇಡಿಗಳು ಮನೆಯಲ್ಲಿ ಕುಳಿತು ಪೋಸ್ಟ್ ಹಾಕುವ ಮೂಲಕ ಇಡೀ ಊರಿಗೆ ಬೆಂಕಿ ಹಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಸಂದೇಶ ಹಾಕುವ ವರನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲು ಸರಕಾರ ನಮಗೆ ಸಂಪೂರ್ಣ ಅಧಿಕಾರ ನೀಡಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

ಐಎಸ್‌ಐ ಸ್ಥಳೀಯರನ್ನು ಬಳಸಿಕೊಂಡು ವಿದ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ಹಾಕಿಕೊಂಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ ಎಂದರು. ದೇಶ ವಿರೋಧಿ ಚಟುವಟಿಕೆ ನಡೆಸುವವರು ಎಲ್ಲೆ ಇದ್ದರೂ ಹುಡುಕುವುದು ನಮ್ಮ ಆದ್ಯ ಕರ್ತವ್ಯ. ಈ ವಿಚಾರದಲ್ಲಿ ನಿರ್ಲಕ್ಷ ಮಾಡುವುದಿಲ್ಲ. ಸ್ಯಾಟಲೈಟ್ ಫೋನ್ ಬಳಕೆ ಮಾಡು ತ್ತಿರುವ ಬಗ್ಗೆ ಪತ್ತೆ ಮಾಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News