ರಾಜ್ಯದಲ್ಲಿ ದಲಿತರ ಸರಣಿ ಹತ್ಯೆಗೆ ಆಡಳಿತ ವೈಫಲ್ಯವೇ ಕಾರಣ: ಬಿಎಸ್ಪಿ ಆರೋಪ

Update: 2020-08-28 11:59 GMT

ಬೆಂಗಳೂರು, ಆ.28: ರಾಜ್ಯದಲ್ಲಿ ಸರಣಿ ದಲಿತರ ಹತ್ಯೆ ನಡೆಯುತ್ತಿದ್ದು, ಇದಕ್ಕೆ ರಾಜ್ಯ ಸರಕಾರದ ಆಡಳಿತ ವೈಫಲ್ಯವೇ ಪ್ರಮುಖ ಕಾರಣ ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಆರೋಪಿಸಿದೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ದಿನೇ ದಿನೇ ದಲಿತರನ್ನು ಗುರಿಯಾಗಿಸಿಕೊಂಡು ಜಾತಿ ಸಂಬಂಧಿತ ಹತ್ಯೆಗಳ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇತ್ತೀಚಿಗಷ್ಟೇ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಅಲೆಮಾರಿ ಕೊರಚ ಸಮುದಾಯದ ಒಂದು ಕುಟಂಬದ ಮೂವರು ಸದಸ್ಯರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿದ್ದರು. ಇದಾದ ಬಳಿಕ, ಇದೀಗ ವಿಜಯಪುರದ ಸಿಂದಗಿಯಲ್ಲಿ ದೇವಸ್ಥಾನದಲ್ಲಿ ಸರಿ ಸಮನಾಗಿ ಕುಳಿತಿದ್ದಕ್ಕೆ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ವ್ಯವಸ್ಥಿತವಾಗಿ ದಲಿತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಪ್ರವೃತ್ತಿ ಆರಂಭವಾಗಿದ್ದು, ಇದಕ್ಕೆ ಚಳ್ಳಕೆರೆ ಹಾಗೂ ಸಿಂದಗಿ ಪ್ರಕರಣಗಳೇ ನೇರ ಸಾಕ್ಷಿಯಾಗಿವೆ. ಈಗಾಗಲೇ ಕೊರಚ ಸಮುದಾಯದ ಹತ್ಯೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಕಳುಹಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಕೆಲ ಅಧಿಕಾರಿಗಳೇ ಜಾತಿ ಹತ್ಯೆಗಳ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ ಎಂದ ಅವರು, ಈ ಕೂಡಲೇ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಜರುಗಿಸಲು ಗೃಹ ಇಲಾಖೆ ಮುಂದಾಗಬೇಕು. ಅದೇ ರೀತಿ, ಮೃತರ ಕುಟಂಬಕ್ಕೆ ಪರಿಹಾರ ಘೋಷಣೆ ಮಾಡಬೇಕು. ಇಲ್ಲದಿದ್ದರೆ, ಪ್ರತಿಭಟನೆ ಮೂಲಕ ಈ ಸರಕಾರಕ್ಕೆ ಬುದ್ಧಿ ಕಲಿಸಲಾಗುವುದು ಎಂದು ಮಾರಸಂದ್ರ ಮುನಿಯಪ್ಪ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News