ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮೂಲಕ ರೈತರನ್ನು ವಂಚಿಸಿದ ಸರಕಾರ: ಭಾಕಿಸಂ ಆಕ್ರೋಶ

Update: 2020-08-28 12:44 GMT

ಕುಂದಾಪುರ, ಆ .28: ರಾಜ್ಯದ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 1961ರ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತ ಸಮುದಾಯವನ್ನು ವಂಚಿಸಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಕುಂದಾ ಪುರ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ವಿರುದ್ಧ ಭಾರತೀಯ ಕಿಸಾನ್ ಸಂಘ ರಾಜ್ಯಾದ್ಯಂತ ಆಂದೋಲನ ಹಮ್ಮಿಕೊಂಡಿದ್ದು, ತಿದ್ದುಪಡಿಯನ್ನು ಕೈಬಿಡುವಂತೆ ರಾಜ್ಯಪಾಲರು, ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿಯನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಕೊರೋನ ಭೀತಿಯಿಂದ ಜಗತ್ತೇ ತಲ್ಲಣಿಸಿರುವ ಸಮಯದಲ್ಲಿ ರಾಜ್ಯ ಸರಕಾರ ಭೂಸುಧಾರಣೆ ಕಾಯ್ದೆಯ ಕಲಂ 79, ಎ ಬಿ ಸಿ, ಮತ್ತು ಕಲಂ 80ನ್ನು ರದ್ದುಗೊಳಿಸಿ ಕೃಷಿಕರಲ್ಲದವರು ಕೃ ಭೂಮಿ ಖರೀದಿಸಬಹುದು, ಕೃಷಿ ಭೂಮಿ ಯನ್ನು ಕೃಷಿಗಲ್ಲದೇ ಬೇರೆ ಉದ್ದೇಶಗಳಿಗೂ ಬಳಸ ಬಹುದು ಎನ್ನುವ ಮೂಲಕ ಭೂಮಾಫಿಯಾಗಳಿಗೆ ಕೃಷಿ ಭೂಮಿಯನ್ನು ಹೊಂದಲು ಹಾಗೂ ಬೇನಾಮಿ ಭೂಮಿಗಳನ್ನು ಸಕ್ರಮಗೊಳಿಸಲು ಅನುವು ಮಾಡಿಕೊಟ್ಟಿದೆ ಎಂದವರು ಆರೋಪಿಸಿದರು.

ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧೀನದಲ್ಲಿ 12 ಸಾವಿರ ಎಕರೆ ಪರಿವರ್ತಿತ ಭೂಮಿ ವಿಲೇವಾರಿಯಾಗದೇ ಉಳಿದಿದೆ. 36 ಸಾವಿರ ಎಕರೆ ಈಗಾಗಲೇ ವಶಕ್ಕೆ ಪಡೆದು ಉಪಯೋಗ ಮಾಡದೆ ಉಳಿಸಿಕೊಂಡಿದೆ. ಇವು ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದ ಸರಕಾರ ಮತ್ತೆ ಪುನಃ ಕೈಗಾರಿಕೆಯ ಅಭಿವೃದ್ಧಿಗೆ ಭೂಮಿಗಳ ಅಗತ್ಯತೆ ಇದೆ ಎಂದು ಕೃಷಿ ಭೂಮಿಗಳನ್ನು ಪೆಯುತ್ತಿದೆ ಎಂದು ಗಾಣಿಗ ದೂರಿದರು.

ಕೊರೋನದಂತಹ ವಿಕೋಪದ ಸಂದರ್ಭದಲ್ಲೂ ನಗರಗಳಲ್ಲಿ, ಕೈಗಾರಿಕೆ ಗಳಿಂದ ಉದ್ಯೊಗ, ಆಹಾರ ನೀಡಲಾಗದೆ ಜನರು ಹಳ್ಳಿಗಳನ್ನು ಸೇರಿ ಕೃಷಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಿರುವಾಗ ಸರಕಾರ ಕೃಷಿಗೆ, ಕೃಷಿಕರಿಗೆ ಉತ್ತೇಜನ ನೀಡುವುದನ್ನು ಬಿಟ್ಟು ರೈತರು ಕೃಷಿ ಭೂಮಿಯಿಂದ ವಂಚಿತರಾಗುವಂತೆ ಮಾಡುತ್ತಿರುವುದು ಸರಕಾರದ ರೈತ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಭಾಕಿಸಂ ಆಕ್ರೋಶ ವ್ಯಕ್ತಪಡಿಸಿದೆ.

ಈ ನಿಟ್ಟಿನಲ್ಲಿ ಶಾಸಕರು, ವಿರೋಧಪಕ್ಷದವರು ಈ ಭೂಮಾಫಿಯಾದ ಕೈ ಗೊಂಬೆಯಾಗಿ ವೌನವಾಗಿದ್ದಾರೆ. ಆದರೆ ಭಾರತೀಯ ಕಿಸಾನ್ ಸಂಘ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಭೂಸುಧಾರಣಾ ಕಾಯಿದೆಯಲ್ಲಿ ಮಾಡಿದ ತಿದ್ದುಪಡಿಯನ್ನು ಕೈಬಿಡುವಂತೆ ಈಗಾಗಲೇ ರಾಷ್ಟ್ರಪತಿ, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರಿಗೆ, ರಾಷ್ಟ್ರಪತಿಯವರಿಗೆ ಹಾಗೂ ಪ್ರಧಾನಮಂತ್ರಿಯವರಿಗೆ ಮನ ಸಲ್ಲಿಸಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಈ ಸಂದರ್ಭದಲ್ಲಿ ತಿಳಿಸಿದರು.

ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ ನೇತೃತ್ವದ ಭಾರತೀಯ ಕಿಸಾನ್ ಸಂಘದ ನಿಯೋಗದಲ್ಲಿ ಸತ್ಯನಾರಾಯಣ ಉಡುಪ, ಪ್ರಾಣೇಶ್ ಯಡಿಯಾಳ್, ಕುಂದಾಪುರ ತಾಲೂಕಿನ ಪದಾಧಿಕಾರಿಗಳಾದ ಚೆನ್ನಕೇಶವ ಕಾರಂತ, ಗಣಪಯ್ಯ ಗಾಣಿಗ, ಸುಧಾಕರ ನಾಯಕ್, ಭೋಜ ಶೆಟ್ಟಿ, ನಾಗೇಂದ್ರ ಉಡುಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News