ಕೊರೋನ: ರಾಜ್ಯದಲ್ಲಿ ಶೇ.20ರಷ್ಟು ಸಣ್ಣ, ಅತಿಸಣ್ಣ ಉದ್ಯಮ ಬಂದ್

Update: 2020-08-29 17:18 GMT

ಉಡುಪಿ, ಆ.29: ಕೊರೋನ ವೈರಸ್ ಹಿನ್ನೆಲೆಯಲ್ಲಿ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳು ಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿವೆ. ಈವರೆಗೆ ರಾಜ್ಯದ ಶೇ.20ರಷ್ಟು ಇಂಥ ಉದ್ದಿಮೆಗಳು ಬಾಗಿಲು ಹಾಕಿದ್ದು, ಪುನರುಜ್ಜೀವನಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ ಕೆ.ಬಿ.ಅರಸಪ್ಪ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನದಿಂದ ಸೃಷ್ಟಿಯಾದ ಬಿಕ್ಕಟ್ಟಿನಿಂದ ಹೊರಬರಲಾರದೇ ನಾವು ಒದ್ದಾಡು ತಿದ್ದೇವೆ. ಬೇಡಿಕೆ ಮತ್ತು ಸರಬರಾಜು ಸರಪಳಿಯ ಸಂಕಷ್ಟ, ಆರ್ಥಿಕತೆಯ ನಕಾರಾತ್ಮಕ ಬೆಳವಣಿಗೆಗಳು ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಲಾಕ್‌ಡೌನ್‌ನ್ನು ತೆಗೆದು ಹಾಕಲಾಗಿದ್ದರೂ, ಕೈಗಾರಿಕೆಗಳು ಚೇತರಿಸಿಕೊಳ್ಳಲು ಬಹಳಷ್ಟು ಸಮಯ ಬೇಕಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

ಈ ಸಂಕಷ್ಟದಿಂದ ಕೈಗಾರಿಕಾ ವಲಯ ಹೊರಬರಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೆಲವು ಪರಿಹಾರಕ್ರಮಗಳನ್ನು ಘೋಷಿಸಿವೆ. ಆದರೆ ಇದರಲ್ಲೂ ಎಂಎಸ್‌ಎಂಇಗಳನ್ನು ತುಳಿಯುವ ಕೆಲಸ ನಡೆಯುತ್ತಿದೆ. ಬ್ಯಾಂಕುಗಳು ಈಗಲೂ ಸಾಲದ ಮೇಲೆ ಶೇ.10ರಿಂದ 12ರಷ್ಟು ಬಡ್ಡಿ ಪಡೆಯುತ್ತಿವೆ. ಅದನ್ನು ಶೇ.6ಕ್ಕೆ ಇಳಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಅರಸಪ್ಪ ನುಡಿದರು.

ಎರಡನೇ ಲಾಕ್‌ಡೌನ್ ತೆರವುಗೊಂಡ ನಂತರ ಸ್ವಲ್ಪ ಚೇತರಿಕೆ ಇದೆ. ಈ ಸಮಯದಲ್ಲಿ ನಮಗೆ ಸರಕಾರದ ತುರ್ತು ಬೆಂಬಲ ಸಿಗಬೇಕಾಗಿದೆ. ರಾಜ್ಯದ ಶೇ.20ರಷ್ಟು ಉದ್ದಿಮೆ ತೆರೆಯುವ ಸ್ಥಿತಿಯಲ್ಲಿಲ್ಲ. ಉಳಿದವೂ ಕಾರ್ಯಾರಂಭ ಗೊಳ್ಳಲು ಸರಕಾರ ಹಾಗೂ ಬ್ಯಾಂಕುಗಳ ಸಹಕಾರ ಬೇಕಿದೆ ಎಂದರು.

ಸರಕಾರ ಎನ್‌ಪಿಎ ಆಗದ ಘಟಕಗಳಿಗೆ ಮಾತ್ರ ನೆರವಿನ ಬೆಂಬಲ ಘೋಷಿಸಿದೆ ಹಾಗೂ ಅವರಿಗೆ ಮಾತ್ರ ನೆರವನ್ನು ನೀಡುತ್ತಿದೆ. ಎನ್‌ಪಿಎ ಆಗಿದ್ದು, ಈ ಹಂತದಲ್ಲಿ ಸಾಲ ದೊರೆಯದಿದ್ದಲ್ಲಿ ಶೇ.50ರಷ್ಟು ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳು ಮುಚ್ಚುವುದು ಖಂಡಿತ. ಹೀಗಾಗಿ ಇವುಗಳಿಗೆ ತಕ್ಷಣ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಅವರು ಹೇಳಿದರು.

ಕೆಐಎಡಿಬಿ ಹಾಗೂ ಕೆಎಸ್‌ಎಸ್‌ಐಡಿಸಿ ಮೂಲಕ ಅಭಿವೃದ್ಧಿ ಪಡಿಸಲಾದ ಕೈಗಾರಿಕಾ ಪ್ರದೇಶಗಳು ಹಾಗೂ ವಸಾಹತುಗಳಲ್ಲಿ ಎಂಎಸ್‌ಎಂಇಗಳಿಗೆ ಜಾಗ ಸಿಗುತ್ತಿಲ್ಲ. ಹೀಗಾಗಿ ನಾವು ಖಾಸಗಿ ಕೈಗಾರಿಕಾ ಎಸ್ಟೇಟ್‌ಗಳಲ್ಲಿ ಭೂಮಿಯನ್ನು ಪಡೆಯಬೇಕಾಗಿದೆ. ಇದನ್ನು ನಮ್ಮ ಶೇ.7ರಿಂದ 8 ಘಟಕಗಳು ಸರಕಾರದ ಕೈಗಾರಿಕಾ ಪ್ರದೇಶಗಳಲ್ಲಿದ್ದು ಉಳಿದ ಶೇ.93ರಷ್ಟು ಖಾಸಗಿ ಒಡೆತನದ ಎಸ್ಟೇಟ್‌ಗಳಲ್ಲಿವೆ. ಇದು ನಮ್ಮನ್ನು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸುತ್ತಿವೆ ಎಂದು ಅರಸಪ್ಪ ವಿವರಿಸಿದರು.

ಹೀಗಾಗಿ ಸರಕಾರ ಪ್ರತಿ ಜಿಲ್ಲೆಗಳಲ್ಲೂ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿ ಅಲ್ಲಿ ಸಣ್ಣ ಹಾಗೂ ಅತಿ ಸಣ್ಣ ಉದ್ದಿಮೆಗಳಿಗೆ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ 50 ಎಕರೆ ಪ್ರದೇಶಗಳನ್ನು ಗುರುತಿಸಬೇಕು. ಅಲ್ಲಿ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಬೆಂಗಳೂರು-ಮಂಗಳೂರು ಮಧ್ಯೆ ನೇರ ರಸ್ತೆ: ಉಡುಪಿಯಲ್ಲಿ 1600 ಘಟಕ: ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಎಂಎಸ್‌ಎಂಇ ಘಟಕ ಕಾರ್ಯಾ ಚರಿಸುತಿದ್ದು, 1.20 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿವೆ. ಒಟ್ಟು 191.50 ಕೋಟಿ ರೂ.ಬಂಡವಾಳ ಹೂಡಿಕೆಯಾಗಿದೆ. ಇಲ್ಲಿ ರಫ್ತು ಆಧಾರಿತ ಕೈಗಾರಿಕೆಗಳ ಅಧಿಕ ಅವಕಾಶಗಳಿದ್ದರೂ, ಸರಕಾರದ ನೆರವು ಸಿಗುತ್ತಿಲ್ಲ. ಇಲ್ಲಿಗೆ ದೊಡ್ಡ ಕೈಗಾರಿಕೆಗಳೂ ಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಭೂಮಿಯ ಅಲಭ್ಯತೆ ಎಂದವರು ಹೇಳಿದರು.

ಇದರಿಂದಾಗಿ ರಾಜ್ಯಕ್ಕೆ ಬರಬೇಕಾದ ಕೈಗಾರಿಕೆಗಳು ಗುಜರಾತ್ ಹಾಗೂ ಚೆನ್ನೈಗೆ ಹೋಗುತ್ತಿವೆ. ಮಂಗಳೂರಿನಲ್ಲಿ ದೊಡ್ಡ ಬಂದರು ಇದ್ದರೂ, ರಾಜ್ಯದ ಹೆಚ್ಚಿನ ಉತ್ಪನ್ನಗಳು ಚೆನ್ನೈ ಮೂಲಕ ರಫ್ತಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಸಂಪರ್ಕದ ಕೊರತೆ. ಕಾಸಿಯಾ ಬಹುಕಾಲದಿಂದ ಬೆಂಗಳೂರು-ಮಂಗಳೂರು ಮಧ್ಯೆ ನೇರ ಸಂಪರ್ಕ ರಸ್ತೆ ಕಲ್ಪಿಸುವಂತೆ ಸರಕಾರವನ್ನು ಒತ್ತಾಯಿಸುತಿದ್ದರೂ ಪ್ರಯೋಜನ ವಾಗಿಲ್ಲ. ಇದರಿಂದ ರಾಜ್ಯಕ್ಕೆ ಸಿಗಬೇಕಾದ ಆದಾಯ ಚೆನ್ನೈ ಪಾಲಾಗುತ್ತಿದೆ ಎಂದರು.

ಲ್ಯಾಂಡ್ ಬ್ಯಾಂಕ್ ಬೇಕು: ಸರಕಾರ ರಾಜ್ಯದಲ್ಲಿ ಲ್ಯಾಂಡ್‌ಬ್ಯಾಂಕ್‌ನ್ನು ತುರ್ತಾಗಿ ತೆರೆಯಬೇಕಾಗಿದೆ. ಕೊರೋನದ ಹೊಡೆತದಿಂದ ನಿರ್ಧಾನಕ್ಕೆ ಚೇತರಿಸಿ ಕೊಳ್ಳುತ್ತಿರುವಾಗ ಇದು ನಮಗೆ ಸಹಾಯವಾಗುತ್ತದೆ. ಅದೇ ರೀತಿ ಶೇ.6ರ ಬಡ್ಡಿದರದಲ್ಲಿ ಸಾಲ, ಎನ್‌ಪಿಎಯನ್ನು ಗಣನೆಗೆ ತೆಗೆದುಕೊಳ್ಳದೇ ನೆರವು, ಲಾಕ್‌ಡೌನ್ ಸಂದರ್ಭದಲ್ಲಿ ಬಡ್ಡಿ ಮಾಫಿ, ಎಂಎಸ್‌ಎಂಇ ಚೇತರಿಕೆಗೆ ನಾವು ಸರಕಾರದ ಮುಂದಿಟ್ಟಿರುವ ಬೇಡಿಕೆಗಳು ಎಂದವರು ನುಡಿದರು.

ಕಾಸಿಯಾದ ಪ್ರಧಾನ ಕಾರ್ಯದರ್ಶಿ ಎನ್.ಆರ್.ಜಗದೀಶ್ ಮಾತನಾಡಿ, ನಾವೀಗ ರಾಜ್ಯದ ಪ್ರತಿ ಜಿಲ್ಲೆಗೆ ತೆರಳಿ, ಕೊರೋನಾದಿಂದಾಗ ಸಂಕಷ್ಟಗಳ ಮಾಹಿತಿ ಪಡೆಯುತಿದ್ದೇವೆ. ಅಲ್ಲದೇ ಸರಕಾರ ಜಾರಿಗೆ ತಂದಿರುವ ಹೊಸ ಕೈಗಾರಿಕಾ ನೀತಿಯ ಕುರಿತು ಜಿಲ್ಲಾ ಸಂಘಗಳ ಸದಸ್ಯರಿಗೆ ಮಾಹಿತಿ ನೀಡಿ ಅವರಿಂದ ಅಭಿಪ್ರಾಯ ಪಡೆಯುತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಸಿಯಾದ ಜಂಟಿ ಕಾರ್ಯದರ್ಶಿ ಜಯಕುಮಾರ್, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್.ಫೆರ್ನಾಂಡೀಸ್, ಪ್ರಧಾನ ಕಾರ್ಯದರ್ಶಿ ವಲ್ಲಭ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News