ಕೆನರಾ ವರ್ಕ್ ಶಾಪ್ ಅಧ್ಯಕ್ಷ ಶ್ರೀನಿವಾಸ್ ಕುಡ್ವ ನಿಧನ

Update: 2020-08-30 12:34 GMT

ಮಂಗಳೂರು, ಆ.30: ಕೆನರಾ ಕೈಗಾರಿಕಾ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಮತ್ತು ನವಭಾರತ ದೈನಿಕ ಪತ್ರಿಕೆಯ ಸ್ಥಾಪಕ ಸಂಪಾದಕ ದಿ.ವಿ.ಎಸ್. ಕುಡ್ವ ಅವರ ದ್ವಿತೀಯ ಪುತ್ರ, ಕೆನರಾ ವರ್ಕ್‌ಶಾಪ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಶ್ರೀನಿವಾಸ್ ವಿ. ಕುಡ್ವ (87) ಶನಿವಾರ ರಾತ್ರಿ ನಂತೂರಿನ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

1933ರಲ್ಲಿ ಜನಿಸಿದ್ದ ಶ್ರೀನಿವಾಸ್ ಕುಡ್ವ ಅವರು ಮಂಗಳೂರಿನ ಡೊಂಗರಕೇರಿ ಕೆನರಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದರು. ಬಳಿಕ ಸಂತ ಅಲೋಶೀಯಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಧರರಾಗಿ ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳಿ ಲಿಹೈ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿ ಗಳಿಸಿದ್ದರು. ನಂತರ ಕೆನರಾ ವರ್ಕ್‌ಶಾಪ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇರ್ಪಡೆ ಗೊಂಡು ಆಧುನಿಕ ತಂತ್ರಜ್ಞಾನ ಬಳಸಿ ಕೈಗಾರಿಕಾ ಉತ್ಪನ್ನವಾದ ಕೆನರಾ ಸ್ಪ್ರಿಂಗ್ಸ್‌ನ ಗುಣಮಟ್ಟವನ್ನು ವೃದ್ಧಿಸಿ ಸಾರಿಗೆ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚುವಂತೆ ಮಹತ್ವದ ಪಾತ್ರ ನಿರ್ವಹಿಸಿದ್ದರು. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರೋಟರಿ ಕ್ಲಬ್ ಮಂಗಳೂರು ಮಿಡ್‌ಟೌನ್ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಕೊಡುಗೈ ದಾನಿಯಾಗಿದ್ದ ಶ್ರೀನಿವಾಸ ಕುಡ್ವ ಸಮಾಜ ಸೇವಕರಾಗಿದ್ದರು. ತಮ್ಮ ಹುಟ್ಟೂರಿನ ಮುಲ್ಕಿ ವಿಜಯ ಕಾಲೇಜಿನ ಉನ್ನತಿಗಾಗಿ ಮತ್ತು ತಾವು ಶಿಕ್ಷಣ ಪಡೆದ ಸಂತ ಅಲೋಶಿಯಸ್ ಕಾಲೇಜಿಗೂ ಆರ್ಥಿಕ ನೆರವು ನೀಡಿದ್ದರು ಹಾಗೂ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News