ಒಳ ಮೀಸಲಾತಿಗೆ ಅನುವು ಮಾಡಿಕೊಡುವ ಸದಾಶಿವ ವರದಿ ಜಾರಿಯಾಗಲಿ: ಕೆ.ಎಚ್.ಮುನಿಯಪ್ಪ

Update: 2020-08-31 12:57 GMT

ಬೆಂಗಳೂರು, ಆ.31: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಯಥಾವತ್ ಆಗಿ ಜಾರಿಗೊಳಿಸಿದರೆ, ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಈಗಾಗಲೇ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನವನ್ನು ಜಾರಿಗೊಳಿಸಿದಂತಾಗುತ್ತದೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ದಲಿತ ಸಮುದಾಯದ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಈಗಾಗಲೇ ಸುಪ್ರೀಂಕೋರ್ಟ್ ಕೂಡ ಅನ್ಯಾಯ ಆಗದಂತೆ ಮೀಸಲಾತಿ ನೀಡಬೇಕೆಂದು ನಿರ್ದೇಶಿಸಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಒಪ್ಪಿಕೊಳ್ಳಬೇಕು. ಬಳಿಕ ಕೇಂದ್ರ ಸರಕಾರಕ್ಕೆ ವರದಿ ಕಳುಹಿಸಬೇಕೆಂದು ಒತ್ತಾಯಿಸಿದರು.

ಆಂಧ್ರದಲ್ಲಿ ಮಂದಕೃಷ್ಣ ಮಾದಿಗ ಒಳಮೀಸಲಾತಿ ಬಗ್ಗೆ ಹೋರಾಟ ಮಾಡಿದ್ದರು. ಕೇಂದ್ರ ಸರಕಾರದ ಮುಂದೆಯೂ ಈ ಪ್ರಸ್ತಾಪವಿದೆ. ಈ ಕೆನೆಪದರ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕು. ಅಲ್ಲದೆ, ಜಾತಿ ಗಣತಿ ವರದಿಯನ್ನು ಬಿ.ಎಸ್.ಯಡಿಯೂರಪ್ಪ ಅವರು ಬಿಡುಗಡೆ ಮಾಡಿದರೆ ಮೀಸಲಾತಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ತುಳಿತಕ್ಕೆ ಒಳಗಾದವರಿಗೆ ವಿಶೇಷ ಸವಲತ್ತು ನೀಡಬಹುದು. ಎಸ್ಸಿ, ಎಸ್ಟಿ, ಒಬಿಸಿ ಯಾರೇ ಆಗಿರಲಿ ಅವರಿಗೂ ಮೀಸಲಾತಿ ಕೊಡಿ ಎಂದರು.

ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ಮಾತನಾಡಿ, ಈಗ ಜನಸಂಖ್ಯೆಗೆ ಅನುಗುಣವಾಗಿ ನಮಗೆ ಒಳಮೀಸಲಾತಿ ನೀಡಬೇಕು. ಕೆನೆಪದರದಡಿ ಮೀಸಲಾತಿ ಪರಿಷ್ಕರಿಸಬೇಕು. ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸುವ ಮೂಲಕ ಹೆಚ್ಚು ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆತ್ತಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಚಂದ್ರಪ್ಪ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News