ಉಡುಪಿ : ಸೋಮವಾರ ಕೋವಿಡ್‌ಗೆ 2 ಬಲಿ, 83 ಮಂದಿಗೆ ಕೊರೋನ ಪಾಸಿಟಿವ್

Update: 2020-08-31 13:57 GMT

ಉಡುಪಿ, ಆ.31: ಉಡುಪಿ ಜಿಲ್ಲೆಯಲ್ಲಿ ಸೋಮವಾರ, ಕೋವಿಡ್-19ಗೆ ಇಬ್ಬರು ಮಧ್ಯವಯಸ್ಕರು ಮೃತಪಟ್ಟಿದ್ದು, ಕಳೆದ 20 ದಿನಗಳ ಕನಿಷ್ಠ 83 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಆ.10ರಂದು 90 ಪ್ರಕರಣಗಳು ದೃಢಪಟ್ಟಿತ್ತು. ಇಂದಿನ 83 ಪಾಸಿಟಿವ್‌ನೊಂದಿಗೆ ಈವರೆಗೆ ಕೊರೋನಕ್ಕೆ ಸೋಂಕಿತರಾದವರ ಒಟ್ಟು ಸಂಖ್ಯೆ 11,596ಕ್ಕೇರಿದೆ. ದಿನದಲ್ಲಿ ಒಟ್ಟು 220 ಮಂದಿಯ ಗಂಟಲು ದ್ರವ ಮಾದರಿಗಳ ವರದಿ ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೋವಿಡ್ ಪಾಸಿಟಿವ್ ಪತ್ತೆಯಾದ 83 ಮಂದಿಯಲ್ಲಿ ಉಡುಪಿ ತಾಲೂಕಿನ 28 ಮಂದಿ, ಕುಂದಾಪುರ ತಾಲೂಕಿನ 35 ಹಾಗೂ ಕಾರ್ಕಳ ತಾಲೂಕಿನ 18 ಮಂದಿ ಇದ್ದು, ಉಳಿದಂತೆ ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಉಡುಪಿಗೆ ಬಂದ ಇಬ್ಬರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಮಕ್ಕಳು ಸೇರಿದಂತೆ 50 ಮಂದಿ ಪುರುಷರು ಹಾಗೂ 33 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 29 ಪುರುಷರು ಹಾಗೂ 24 ಮಹಿಳೆಯ ರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ತಿಳಿಸಿದರು.

ಪಾಸಿಟಿವ್ ದೃಢಗೊಂಡ 83 ಮಂದಿಯಲ್ಲಿ 21 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 32 ಮಂದಿ ಶೀತಜ್ವರದಿಂದ, ಮೂವರು ಉಸಿರಾಟ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ 27 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.

303 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಸೋಮವಾರ 303 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 81ಮಂದಿ ಕೋವಿಡ್ ಆಸ್ಪತ್ರೆಗಳಿಂದ, 222 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 9101ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2398 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 1125 ಮಂದಿ ವಿವಿಧ ಆಸ್ಪತ್ರೆ ಗಳಲ್ಲಿ ಹಾಗೂ 1273 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

235  ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಇಂದು ಒಟ್ಟು 235 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 191 ಮಂದಿ, ಕೋವಿಡ್ ಸಂಪರ್ಕಿತರು 6 ಮಂದಿ ಇದ್ದರೆ, ಉಸಿರಾಟ ತೊಂದರೆಯ 4 ಮಂದಿ, ಶೀತಜ್ವರದಿಂದ ಬಳಲುವ 24 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 10 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪರೀಕ್ಷೆಗಾಗಿ ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 71355ಕ್ಕೇರಿದೆ. ಇವುಗಳಲ್ಲಿ ಈವರೆಗೆ 59,587 ನೆಗೆಟಿವ್, 11596 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 97 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿ ದ್ದಾರೆ. ಇನ್ನು ಒಟ್ಟು 172 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.

ಎರಡು ಬಲಿ: ಎರಡು ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ಉಡುಪಿ ತಾಲೂಕಿನ ಇಬ್ಬರು ಮಧ್ಯವಯಸ್ಕ ಪುರುಷರು ಇಂದು ಬಲಿಯಾಗಿದ್ದಾರೆ. ಇವರಲ್ಲಿ ಒಬ್ಬರು 43 ವರ್ಷದವರಾಗಿದ್ದು, ಇವರು ಉಸಿರಾಟದ ತೊಂದರೆಯೊಂದಿಗೆ ಯಕೃತ್ತಿನ ಕ್ಯಾನ್ಸರ್, ಮಧುಮೇಹ, ಹೃದಯ ಸಮಸ್ಯೆಯಿಂದ ಬಳಲುತಿದ್ದರು. ಇನ್ನೊಬ್ಬರು 40 ವರ್ಷ ಪ್ರಾಯದವರಾಗಿದ್ದು, ಇವರು ರಕ್ತ ಕ್ಯಾನ್ಸರ್‌ನೊಂದಿಗೆ ಇತರ ಸಮಸ್ಯೆಗಳಿಂದ ಬಳಲುತಿದ್ದು, ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದರು ಎಂದು ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಗೆ ಬಲಿ ಯಾದವರ ಸಂಖ್ಯೆ 97 ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News