ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಆಗಿದ್ದರು: ಸಿದ್ದರಾಮಯ್ಯ

Update: 2020-09-01 17:02 GMT

ಬೆಂಗಳೂರು, ಸೆ. 1: ನಿನ್ನೆ ನಿಧನರಾದ ಭಾರತರತ್ನ, ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರಣವ್ ಮುಖರ್ಜಿ ಅವರಿಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್‍ಖಂಡ್ರೆ, ಸಲೀಂ ಅಹ್ಮದ್ ಸೇರಿದಂತೆ ಇನ್ನಿತರರು ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದ ವಿಪಕ್ಷ  ನಾಯಕ ಸಿದ್ದರಾಮಯ್ಯ, ಹಿರಿಯ ಮುತ್ಸದ್ದಿ ಪ್ರಣವ್ ಮುಖರ್ಜಿ ಅವರು ಈ ದೇಶ ಕಂಡ ಕೆಲವೇ ಕೆಲವು ಬುದ್ಧಿಜೀವಿಗಳಲ್ಲಿ ಅವರು ಒಬ್ಬರು. ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಆಗಿದ್ದರು ಎಂದು ಸ್ಮರಿಸಿದರು.

ಪಕ್ಷದಲ್ಲಿ ಏನೇ ಸಮಸ್ಯೆಗಳು ಎದುರು ಅದನ್ನು ಪರಿಹರಿಸುವ ಜವಾಬ್ದಾರಿ ಹೊರುತ್ತಿದ್ದರು. ಬುದ್ಧಿವಂತಿಕೆಯಿಂದ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ನಾನು ಕಾಂಗ್ರೆಸ್ ಸೇರಿದ ಮೇಲೆ ಅವರನ್ನು ಭೇಟಿ ಮಾಡಿದ್ದೆ. ನನಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದ್ದರು ಎಂದು ಅವರು ನೆನಪು ಮಾಡಿಕೊಂಡರು.

ನಾನು ಮುಖ್ಯಮಂತ್ರಿಯಾದ ಬಳಿಕ ಅವರನ್ನು ಹಲವು ಬಾರಿ ಭೇಟಿ ಮಾಡುತ್ತಿದ್ದೆ. ರಾಷ್ಟ್ರಪತಿ ಚುನಾವಣೆಗೆ ನಿಂತಾಗ ಮತ ಕೇಳಲು ಬಂದಿದ್ದರು. ನಮ್ಮ ಶಕ್ತಿಗಿಂತ ಹೆಚ್ಚಿನ ಮತಗಳು ರಾಜ್ಯದಿಂದ ಸಿಕ್ಕಿದ್ದವು ಎಂದ ಅವರು, ಪ್ರಣವ್ ಮುಖರ್ಜಿ ಅವರಿಗೆ ರಾಜಕೀಯ ರಂಗದ ಅಜಾತಶತ್ರು ಎಂದು ಗುಣಗಾನ ಮಾಡಿದರು.

ಪ್ರಗತಿಪರ ವಿಚಾರ ಬಂದಾಗ ಅದರ ಪರವಾಗಿ ನಿಲ್ಲುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉಪಯೋಜನೆಗೆ ರಾಷ್ಟ್ರಪತಿಯಾಗಿ ಸಹಿ ಹಾಕಿದ್ದರು. ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾಗಿ ಅವರು ಮಾಡಿದ ಸಾಧನೆ ನಿಜಕ್ಕೂ ಮಾದರಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಪ್ರಣವ್ ಮುಖರ್ಜಿ ಅವರು ದೊಡ್ಡ ವಿಚಾರವಾದಿ. 1977ರಲ್ಲಿಯೆ ನನಗೆ ಅವರ ಪರಿಚಯವಾಗಿತ್ತು. 1978ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದರು. ಆಗ ಪ್ರಣವ್ ಮುಖರ್ಜಿ ಅವರೊಂದಿಗೆ ಒಟ್ಟಿಗೆ ಕೆಲಸ ಮಾಡಿದ್ದೆವು ಎಂದು ಹೇಳಿದರು.

ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಮುಖರ್ಜಿಯವರ ಜತೆ ಹಳ್ಳಿಗಳಿಗೆ ಭೇಟಿ ನೀಡಿದ್ದೆವು. ಪ್ರಣವ್ ಅವರಿಗೆ ಓದುವ ಹವ್ಯಾಸವಿತ್ತು. ಅಂಥ ಮುತ್ಸದ್ದಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರು ಕಂಬನಿ ಮಿಡಿದರು.

ಕಲಬುರಗಿಯಲ್ಲಿ ಬೌದ್ಧ ವಿಹಾರ ನಿರ್ಮಿಸಿದಾಗ ಅದನ್ನು ಪಾಲಿ ಇನ್ಸ್‍ಟಿಟ್ಯೂಟ್ ಮಾಡುವಂತೆ ಅವರು ನನಗೆ ಸಲಹೆ ನೀಡಿದ್ದರು. ಆದರೆ, ಪಾಲಿ ಭಾಷೆಗೆ ವಿದ್ಯಾರ್ಥಿಗಳು ಬರಲ್ಲ. ಆ ಭಾಷೆಯ ಶಿಕ್ಷಕರು ಸಿಗುವುದಿಲ್ಲ ಎಂದಿದ್ದೆ. ಆಗ ನಾನೇ ಪಶ್ಚಿಮ ಬಂಗಾಳದಿಂದ ಕಳುಹಿಸಿಕೊಡುತ್ತೇನೆ ಎಂದು ಪ್ರಣವ್ ದಾದಾ ಹೇಳಿದ್ದರು

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನಮ್ಮ ತಂದೆ ಮತ್ತು ಪ್ರಣವ್ ಅವರು ಆತ್ಮೀಯ ಸ್ನೇಹಿತರಾಗಿದ್ದರು. ನಮ್ಮ ಕುಟುಂಬದ ಜತೆ ನಿಕಟ ಸಂಬಂಧವಿತ್ತು. ನಮ್ಮ ತಂದೆ ನಿಧನರಾದಾಗ ಅಂತ್ಯಕ್ರಿಯೆಗೆ ಪ್ರಣವ್ ಮುಖರ್ಜಿ ಅವರು ಬೆಂಗಳೂರಿಗೆ ಬಂದಿದ್ದರು. ಪ್ರಣವ್ ಮುಖರ್ಜಿ ಅವರು ವಿವಾದ ರಹಿತ ಜನಪ್ರಿಯ ನಾಯಕ ಎಂದು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News