ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡಲಿ: ಕೆ.ನೀಲಾ

Update: 2020-09-02 11:47 GMT

ಬೆಂಗಳೂರು, ಸೆ.2: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮನಸೋ ಇಚ್ಛೆ ಕಾಯ್ದೆಗಳನ್ನು ರೂಪಿಸುತ್ತಿದೆ. ಆದರೆ, ಕೇಂದ್ರ ಸರಕಾರಕ್ಕೆ ನಿಜವಾಗಿ ಮಹಿಳಾ ಪರವಾದ ಕಾಳಜಿ ಇದ್ದರೆ ಸಂಸತ್‍ನಲ್ಲಿ ಶೇ.33 ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲಿ ಎಂದು ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ನೀಲಾ ಸವಾಲು ಹಾಕಿದ್ದಾರೆ.

ಬುಧವಾರ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರರು ಮತ್ತು ಮಾನವ ಹಕ್ಕು ಕಾರ್ಯಕರ್ತರ ನೇತೃತ್ವದಲ್ಲಿ ಆನ್‍ಲೈನ್‍ನಲ್ಲಿ ಆಯೋಜಿಸಿದ್ದ ‘ನಾವೆದ್ದು ನಿಲ್ಲದಿದ್ದರೆ’ ಎಂಬ ರಾಷ್ಟ್ರೀಯ ಮಟ್ಟದ ಅಭಿಯಾನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನೀತಿ, ನಿರೂಪಣೆಯಲ್ಲಿ ಮಹಿಳಾ ಪ್ರಾತಿನಿಧ್ಯವಿಲ್ಲದೆ ರೂಪಿಸುವ ಯಾವುದೇ ಯೋಜನೆ, ಕಾರ್ಯಕ್ರಮಗಳು ಸಮಗ್ರ ಅಭಿವೃದ್ದಿಗೆ ಪೂರಕವಾಗಿರುವುದಿಲ್ಲವೆಂದು ತಿಳಿಸಿದರು.

ಕೇಂದ್ರ ಸರಕಾರ ಲಾಕ್‍ಡೌನ್ ಸಮಯವನ್ನು ದುರುಪಯೋಗ ಮಾಡಿಕೊಂಡು ಪರಿಸರ ಸಂಪನ್ಮೂಲಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಒತ್ತೆ ಇಡುವಂತಹ ಪರಿಸರ ಸಂರಕ್ಷಣಾ ಕಾಯ್ದೆಗೆ ಕರಡು ಅಧಿಸೂಚನೆ ಹೊರಡಿಸಿದೆ. ಈ ಕರಡಿನಲ್ಲಿ ಆದಿವಾಸಿ, ಬುಡಕಟ್ಟು ಸಮುದಾಯದ ಪರವಾಗಿ ಒಂದು ಅಂಶವನ್ನೂ ನಮೂದಿಸಿಲ್ಲವೆಂದು ಅವರು ಅತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಪರಿಸರ ಸಂರಕ್ಷಣಾ ಕಾಯ್ದೆಗೆ ಹೊರಡಿಸಿರುವ ಕರಡು ಅಧಿಸೂಚನೆಯನ್ನು ವಾಪಸ್ ಪಡೆದು 1996, 2006 ಪರಿಸರ ಸಂರಕ್ಷಣಾ ಕಾಯ್ದೆಯನ್ನು ಜನಪರವಾಗಿ ಬಲ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ದಲಿತ ಭೂ ಹಕ್ಕುಗಳ ಹೋರಾಟಗಾರ್ತಿ ಜ್ಯೋತಿರಾಜ್ ಮಾತನಾಡಿ, ದಲಿತರ ನೋವು, ಅಪಮಾನ, ತಾರತಮ್ಯಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಈಗಲೂ ದಲಿತ ಸಮುದಾಯ ನಿರಂತರವಾಗಿ ಅಸ್ಪೃಶ್ಯತೆಗೆ ಒಳಗಾಗುತ್ತಿದೆ. ಹಾಗೂ ದಲಿತರಿಂದ ಸುಮಾರು 32 ರೀತಿಯ ಬಿಟ್ಟಿ ಚಾಕರಿಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ದಲಿತರು, ಆದಿವಾಸಿಗಳು ಪರಿಸರವನ್ನು ಯಾವತ್ತೂ ವ್ಯವಹಾರದ ದೃಷ್ಟಿಯಿಂದ ನೋಡಿದವರಲ್ಲ. ಪರಿಸರದಲ್ಲಿ ಆಧ್ಯಾತ್ಮಿಕತೆಯನ್ನು ಕಂಡುಕೊಂಡವರು. ಆದರೆ, ಇವತ್ತು ಸರಕಾರ ಪರಿಸರ ಸಂಪನ್ಮೂಲಗಳನ್ನು ಕಾರ್ಪೊರೇಟ್ ಶಕ್ತಿಗಳಿಗೆ ಒತ್ತೆ ಇಡಲು ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಸರಕಾರ ತನ್ನ ಅಧಿಕಾರವನ್ನು ಸಮುದಾಯಗಳ ಒಗ್ಗೂಡಿಸುವಿಕೆ ಹಾಗೂ ಏಳ್ಗೆಗೆ ಬಳಸಿಕೊಳ್ಳಬೇಕೆ ವಿನಃ ಸಮುದಾಯಗಳ ನಡುವೆ ದ್ವೇಷ ಬಿತ್ತುವುದಕ್ಕಲ್ಲ. ಇವತ್ತು ದೇಶದಲ್ಲಿ ಜನಪರ ಹೋರಾಟಗಾರರ ಮೇಲೆ ಹಲ್ಲೆ ಹಾಗೂ ಬಂಧನ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಶೋಧಕಿ ಆಶಾ ರಮೇಶ್, ಎಐಪಿಡ್ಲ್ಯುಎನ ಅಧ್ಯಕ್ಷೆ ರತಿ ರಾವ್ ಸೇರಿದಂತೆ ಹಲವರು ಮಾತನಾಡಿದರು. ಮಾನವ ಹಕ್ಕುಗಳ ಹೋರಾಟಗಾರ್ತಿ ವಿದ್ಯಾ ದಿನಕರ್ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News