ನಾರಾಯಣಗುರುಗಳ ಸಂದೇಶ ಅನುಕರಣೀಯ: ಪ್ರೊ. ಧರ್ಮ

Update: 2020-09-02 11:38 GMT

ಮಂಗಳೂರು, ಸೆ.2:ಮೂಢನಂಬಿಕೆ ತೊರೆದು ವೈಜ್ಞಾನಿಕವಾಗಿ ಅವಲೋಕಿಸುವ ಗುಣವನ್ನು ಎಲ್ಲರೂ ಮೈಗೂಡಿಸುವಂತೆ ಬ್ರಹ್ಮ ಶ್ರೀ ನಾರಾಯಣ ಗುರುಗಳು ನೀಡಿರುವ ಸಂದೇಶ ಎಂದೆಂದಿಗೂ ಅನುಕರಣೀಯ ಎಂದು ಮಂಗಳೂರು ವಿ.ವಿ. (ಪರೀಕ್ಷಾಂಗ) ಕುಸಚಿವ ಪ್ರೊಪಿ.ಎಲ್.ಧರ್ಮ ಹೇಳಿದರು.

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಬಳಗ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿ.ವಿ ಹಾಗೂ ಯುವವಾಹಿನಿ ಕೊಲ್ಯ ಘಟಕದ ಸಹಭಾಗಿತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಗ್ಲಾಸ್‌ಹೌಸ್‌ನಲ್ಲಿ ಬುಧವಾರ ನಡೆದ ‘ಶ್ರೀ ಗುರು ಸ್ಮೃತಿ-2020’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುರುಗಳು ಮೌಲ್ಯಾಧಾರಿತ ಜೀವನಕ್ಕೆ ಅಗತ್ಯವಿರುವ ಹಲವು ತತ್ವಗಳನ್ನು ಬೋಧಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅಹಂಕಾರ ತ್ಯಾಗ ಮಾಡುವ ಬಗ್ಗೆ ವಿಶೇಷವಾಗಿ ಅವರು ಕರೆ ನೀಡಿದ್ದಾರೆ ಎಂದರು.

ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಸಮಾಜ ಸೇವಕ ಶಶಿರಾಜ್ ಕುಂಪಲ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ರವಿ ಕೊಂಡಾಣ, ಕೊಲ್ಯ ಘಟಕದ ಯುವವಾಹಿನಿಯ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕ ಜಗಜೀವನ್ ಕೊಲ್ಯ ಅತಿಥಿಗಳಾಗಿದ್ದರು. ದಿನೇಶ್ ಸುವರ್ಣ ರಾಯಿ, ಕುಸುಮಾಕರ ಕುಂಪಲ ಮುಂತಾದವರು ಉಪಸ್ಥಿತರಿದ್ದರು.

ಶ್ರೀರಕ್ಷಾ ಎಸ್.ಎಚ್.ಪೂಜಾರಿ ಹಾಡಿರುವ ‘ಮನುಕುಲ ದೀಪ’ ಶೀರ್ಷಿಕೆಯ ಬ್ರಹ್ಮಶ್ರೀ ನಾರಾಯಣ ಗುರುದೇವರ ಭಕ್ತಿಸುಧೆಯ ವಿಡಿಯೋ ಬಿಡುಗಡೆ ಮಾಡಲಾಯಿತು. ಬಿಲ್ಲವ ಸಮಾಜದ ಅರ್ಹ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ನೆರವೇರಿತು. ರವಿ ಕೊಂಡಾಣ ಸ್ವಾಗತಿಸಿದರು. ಅಜಿತ್ ಕುಮಾರ್ ಪಜೀರ್ ವಂದಿಸಿದರು. ಪ್ರಜ್ಞಾ ಒಡಿಲ್ನಾಳ, ಲತೀಶ್ ಎಂ.ಸಂಕೊಲಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News