ಡ್ರಗ್ಸ್ ಜಾಲ ಆರೋಪದ ಬಗ್ಗೆ ಯಾವುದೇ ನಿರ್ಧಾರ ಸದ್ಯಕ್ಕಿಲ್ಲ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್

Update: 2020-09-02 12:43 GMT

ಬೆಂಗಳೂರು, ಸೆ.2: ಸದ್ಯದ ಪರಿಸ್ಥಿತಿಯಲ್ಲಿ ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ಜಾಲದ ನಂಟು ಆರೋಪ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಹೇಳಿದ್ದಾರೆ.

ಬುಧವಾರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದೆ. ಯಾರು, ಯಾವ ಕಾರಣಕ್ಕೆ ಇದನ್ನು ಅವಲಂಬಿಸಿದರು ಎಂಬೆಲ್ಲ ವಿಷಯಗಳು ಹೊರಬರಬೇಕಿದೆ. ಆನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದರು.

ಆರೋಪಗಳು ವೈಯಕ್ತಿಕವಾಗಿ ಬಂದಿವೆ. ಆದರೆ, ಇಂತಹ ವಿಷಯದಲ್ಲಿ ತನಿಖೆ ನಡೆದು ಆರೋಪ ಸಾಬೀತಾಗಬೇಕಿದೆ. ನಂತರವಷ್ಟೇ ಏನು ಮಾಡಬೇಕೆಂಬುದನ್ನು ಚಿಂತನೆ ನಡೆಸಲಿದ್ದೇವೆ ಎಂದು ಹೇಳಿದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರ.ಗೋವಿಂದು ಮಾತನಾಡಿ, ತೆವಲಿಗೆ ಬಂದಂತಹ ಕೆಲವು ಕಲಾವಿದರು ಈ ಡ್ರಗ್ಸ್ ಮಾಫಿಯಾದಲ್ಲಿ ಇರಬಹುದು. 40 ವರ್ಷದಿಂದ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂದ್ರಜಿತ್ ಲಂಕೇಶ್ ಹೇಳಿಕೆ ಆಶ್ಚರ್ಯವಾಗಿದೆ. ಅವರು ಆರೋಪ ಸಾಬೀತು ಮಾಡದಿದ್ದರೆ ಕೋರ್ಟ್ ಅವರಿಗೆ ಛೀಮಾರಿ ಹಾಕಬಹುದು. ಇಂದ್ರಜಿತ್ ಲಂಕೇಶ್ ನಮ್ಮ ಬಳಿ ಬರದೇ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದಾರೆ. ಹಾಗಾಗಿ ಇಂದ್ರಜಿತ್ ಅವರನ್ನ ಫಿಲಂ ಚೇಂಬರ್ ಗೆ ಕರೆಸಲ್ಲ. ಪ್ರಕರಣ ತನಿಖಾ ಹಂತದಲ್ಲಿ ಇರುವದರಿಂದ ಯಾವುದೇ ಕ್ರಮ ಕೈಗೊಳ್ಳಲ್ಲ. ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಜೈರಾಜ್ ಮಾತನಾಡಿ, 6 ತಿಂಗಳಿಂದ ಉಸಿರುಗಟ್ಟಿಸುವ ವಾತಾವರಣದಲ್ಲಿ ಚಿತ್ರರಂಗವಿದೆ. ಇದರ ಜೊತೆಗೆ ಈಗ ಡ್ರಗ್ಸ್ ಚರ್ಚೆ ಶುರುವಾಗಿರುವುದು ತುಂಬಾ ಬೇಸರವಾಗಿದೆ. ಯಾವುದೇ ದೂರು ಬಂದಾಗ ಅದರ ಬಗ್ಗೆ ಮಾಹಿತಿ ಪಡೆದು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಗಾಂಧಿ ನಗರ ಗಾಂಜಾ ನಗರವಾಗಿಲ್ಲ: ನಟ ದೊಡ್ಡಣ್ಣ

ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ಎಲ್ಲರಿಗೂ ಆಘಾತವಾಗಿದೆ. ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಚಿತ್ರರಂಗವನ್ನೆ ದೂರುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅವರಿಗೆ ನ್ಯಾಯಾಲಯ ಸೂಕ್ತ ಶಿಕ್ಷೆ ನೀಡುತ್ತದೆ ಎನ್ನುವ ನಂಬಿಕೆ ಇದೆ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ. ತುತ್ತಿನ ಚೀಲವನ್ನ ಚಿತ್ರರಂಗ ತುಂಬಿಸುತ್ತಿದೆ. ಆದರೆ ಗಾಂಧಿನಗರವನ್ನ ತಪ್ಪಾಗಿ ಬಿಂಬಿಸಲಾಗುತ್ತಿದೆ. ಗಾಂಧಿನಗರ ಇನ್ನೂ ಗಾಂಜಾ ನಗರವಾಗಿಲ್ಲ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News