ಡಿಜೆ ಹಳ್ಳಿ ಗಲಭೆ ಪ್ರಕರಣ: ನ್ಯಾಯಾಂಗ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

Update: 2020-09-02 13:08 GMT

ಬೆಂಗಳೂರು, ಸೆ.2: ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸತ್ಯಗಳು ಹೊರಗೆ ಬರಬೇಕಾದರೆ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆಸಲು ಸರಕಾರ ಮುಂದಾಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬುಧವಾರ ಕಾವಲ್ ಭೈರಸಂದ್ರದಲ್ಲಿ ದುಷ್ಕರ್ಮಿಗಳ ದಾಳಿಗೆ ಸುಟ್ಟು ಹೋಗಿರುವ ಶಾಸಕ ಆರ್.ಶ್ರೀನಿವಾಸಮೂರ್ತಿ ಮನೆ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಘಟನೆ ನಡೆದಾಗ ನಾನು ಕೋವಿಡ್ ಸೋಂಕು ತಗಲಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದೆ. ಆನಂತರ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಆದುದರಿಂದ, ಇಲ್ಲಿಗೆ ಇವತ್ತು ಬಂದಿದ್ದೇನೆ. ಈ ಘಟನೆ ನಡೆದು 20 ದಿನ ಆಗಿದೆ. ನಾಲ್ವರು ಸತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿರುವುದರಿಂದ ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನವೀನ್ ಎಂಬಾತ ಅಂದು ಸಂಜೆ 6.30ರ ಸುಮಾರಿಗೆ ಪ್ರವಾದಿ ಬಗ್ಗೆ ಅವಹೇಳನಕಾರಿ, ಅವಮಾನಕಾರಿಯಾದ ಪೋಸ್ಟ್ ಮಾಡಿದ್ದ. 7.45ಕ್ಕೆ ಕೆಲವರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಎಫ್‍ಐಆರ್ ದಾಖಲು ಮಾಡಲಾಗಿತ್ತು. 8.30-8.45ರ ಸುಮಾರಿಗೆ ಡಿಸಿಪಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಶಾಸಕ ರಿಝ್ವಾನ್ ಅರ್ಶದ್‍ಗೆ ಅವರು ಕರೆ ಮಾಡಿ ರಾತ್ರಿ 10.30ಕ್ಕೆ ಕರೆಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಈ ಘಟನೆಯಲ್ಲಿ ಶ್ರೀನಿವಾಸಮೂರ್ತಿ ಮನೆಗೆ, ವಾಹನಗಳಿಗೆಲ್ಲ ಬೆಂಕಿ ಹಚ್ಚಿದ್ದಾರೆ. ನವೀನ್‍ನನ್ನು ಕೂಡಲೆ ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಪೊಲೀಸರು ಹೇಳುವ ಪ್ರಕಾರ ಅಂದು ಆತನನ್ನು ಬಂಧಿಸಲಾಗಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಂಪು ಸೇರಿದ್ದರಿಂದ ಹೊರಗಡೆ ತರಲು ಸಾಧ್ಯವಾಗಲಿಲ್ಲ. ರಾತ್ರಿ 3 ಗಂಟೆಗೆ ಆತನನ್ನು ಕರೆ ತಂದೆವು ಎಂದು ತಿಳಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ದೂರು ಸ್ವೀಕಾರ ಹಾಗೂ ನವೀನ್ ಬಂಧನದ ನಡುವೆ 6 ಗಂಟೆಗಳ ಅಂತರ ಇತ್ತು. ಕೂಡಲೆ ಆತನನ್ನು ಬಂಧಿಸಿ, ಈ ವಿಚಾರವನ್ನು ಅಲ್ಲಿದ್ದವರ ಗಮನಕ್ಕೆ ತಂದಿದ್ದರೆ ಇಷ್ಟೊಂದು ಗಲಾಟೆ ನಡೆಯುತ್ತಿರಲಿಲ್ಲವೇನೋ ಅನ್ನಿಸುತ್ತದೆ. ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿರಲಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಯಾವ ಪಕ್ಷದವರೇ ಇರಲಿ, ಎಷ್ಟೇ ಶಕ್ತಿಗಳು ಇರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು.

ಬಂಧಿಸಲ್ಪಟ್ಟಿರುವ ಸುಮಾರು 380 ಜನರಲ್ಲಿ ಕೆಲವರು ಅಮಾಯಕರು ಇದ್ದಾರೆ ಎಂದು ಹೇಳಲಾಗುತ್ತಿದೆ. ತನಿಖೆ ಮಾಡುವಾಗ ಅಂತಹವರ ವಿರುದ್ಧ ಯಾವುದೆ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಕೂಡಲೆ ಅಮಾಯಕರನ್ನು ಬಿಡುಗಡೆ ಮಾಡಬೇಕು. ತಪ್ಪಿತಸ್ಥರಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಶ್ರೀನಿವಾಸಮೂರ್ತಿಗೆ ಸರಕಾರ ಭದ್ರತೆ ನೀಡಬೇಕು. ಆದಷ್ಟು ಬೇಗ ನಿಷ್ಪಕ್ಷಪಾತವಾಗಿ ತನಿಖೆಯನ್ನು ಪೂರ್ಣಗೊಳಿಸಬೇಕು. ನಾಲ್ವರು ಸತ್ತಿರುವಂತಹ ಈ ಘಟನೆಯಲ್ಲಿ ಎಲ್ಲ ಸತ್ಯಗಳು ಹೊರಗೆ ಬರಬೇಕಾದರೆ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಅವರು ಹೇಳಿದರು.

ಸದನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು. ಯಾವುದೆ ಪಕ್ಷದ ಬಗ್ಗೆ, ಯಾವ ಮುಖಂಡರ ಬಗ್ಗೆಯೂ ನಾನು ಈಗ ಮಾತನಾಡಲ್ಲ. ಪ್ರಾಥಮಿಕ ಹಂತದಲ್ಲೆ ಬಿಜೆಪಿಯವರ ರೀತಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಸಾಕ್ಷ್ಯಾಧಾರಗಳಿಲ್ಲದೆ ಯಾವುದೇ ಆರೋಪ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ನಸೀರ್ ಅಹ್ಮದ್, ವೆಂಕಟರಮಣಪ್ಪ, ಶಾಸಕ ರಿಝ್ವಾನ್ ಅರ್ಶದ್, ಡಿಸಿಪಿ ಶರಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News