ಉಡುಪಿ: ದಿನದಲ್ಲಿ 186 ಮಂದಿಗೆ ಕೋವಿಡ್-19 ಪಾಸಿಟಿವ್, ಇಬ್ಬರು ಮೃತ್ಯು

Update: 2020-09-04 14:00 GMT

ಉಡುಪಿ, ಸೆ. 4: ನೋವೆಲ್ ಕೊರೋನ ಸೋಂಕಿನಿಂದ ಶುಕ್ರವಾರ ಜಿಲ್ಲೆಯಲ್ಲಿ 332 ಮಂದಿ ಗುಣಮುಖರಾಗುವ ಮೂಲಕ ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ರೋಗದಿಂದ ಮುಕ್ತರಾದವರ ಸಂಖ್ಯೆ 10 ಸಾವಿರವನ್ನು (10,261) ದಾಟಿದೆ. ಜಿಲ್ಲೆಯಲ್ಲಿ ಈಗ 1967 ಮಂದಿ ಮಾತ್ರ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ.

ಶುಕ್ರವಾರ ಜಿಲ್ಲೆಯಲ್ಲಿ 186 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದು, ಈ ಮೂಲಕ ಈವರೆಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 12,336ಕ್ಕೆ ಏರಿದೆ. ಅಲ್ಲದೇ ದಿನದಲ್ಲಿ 1005 ಮಂದಿಯ ಫಲಿತಾಂಶ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೋವಿಡ್ ಪಾಸಿಟಿವ್ ಪತ್ತೆಯಾದ 186 ಮಂದಿಯಲ್ಲಿ ಉಡುಪಿ ತಾಲೂಕಿನ 109 ಮಂದಿ, ಕುಂದಾಪುರ ತಾಲೂಕಿನ 42 ಹಾಗೂ ಕಾರ್ಕಳ ತಾಲೂಕಿನ 27 ಮಂದಿ ಇದ್ದು, ಉಳಿದಂತೆ ಹೊರಜಿಲ್ಲೆಯಿಂದ ಉಡುಪಿಗೆ ಚಿಕಿತ್ಸೆಗೆಂದು ಬಂದ ಎಂಟು ಮಂದಿಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿದೆ ಎಂದವರು ತಿಳಿಸಿದರು.

ದಿನದಲ್ಲಿ ಮಕ್ಕಳು ಸೇರಿದಂತೆ 105 ಮಂದಿ ಪುರುಷರು ಹಾಗೂ 81 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 36 ಪುರುಷರು ಹಾಗೂ 30 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ಹೇಳಿದರು.

ಪಾಸಿಟಿವ್ ದೃಢಗೊಂಡ 186 ಮಂದಿಯಲ್ಲಿ 79 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 77 ಮಂದಿ ಶೀತಜ್ವರದಿಂದ, ಒಬ್ಬ ಉಸಿರಾಟ ತೊಂದರೆಯಿಂದ ಬಳಲುತಿದ್ದು ಸೋಂಕು ಕಾಣಿಸಿಕೊಂಡಿದೆ. ಇನ್ನು ದೇಶೀಯ ಪ್ರವಾಸದಿಂದ ಮರಳಿದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 28 ಮಂದಿಯ ಸೋಂಕಿನ ಸಂಪರ್ಕ ಇನ್ನೂ ಪತ್ತೆಯಾಗಬೇಕಿದೆ ಎಂದರು.

332 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಶುಕ್ರವಾರ 332 ಮಂದಿ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 107 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 225 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿ ನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 10261ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 1967 ಮಂದಿ ಇನ್ನೂ ಚಿಕಿತ್ಸೆಯಲ್ಲಿ ದ್ದಾರೆ. ಇವರಲ್ಲಿ 996 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 971 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

1172 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಶುಕ್ರವಾರ ಒಟ್ಟು 1172 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾ ಗಿದೆ. ಇದರಲ್ಲಿ ಕೋವಿಡ್ ಶಂಕಿತರು 908 ಮಂದಿ, ಕೋವಿಡ್ ಸಂಪರ್ಕಿತರು 85 ಮಂದಿ ಇದ್ದರೆ, ಉಸಿರಾಟ ತೊಂದರೆಯ 5 ಮಂದಿ, ಶೀತಜ್ವರದಿಂದ ಬಳಲುವ 49 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 125 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪರೀಕ್ಷೆಗಾಗಿ ಪಡೆದ 1172 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 75456ಕ್ಕೇರಿದೆ. ಇವುಗಳಲ್ಲಿ ಈವರೆಗೆ 62,873 ನೆಗೆಟಿವ್, 12336 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 108 ಮಂದಿ ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಇನ್ನು ಒಟ್ಟು 108 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.

ಇಬ್ಬರ ಸಾವು: ಇಂದು ಜಿಲ್ಲೆಯಲ್ಲಿ ಉಡುಪಿ ಮತ್ತು ಕುಂದಾಪುರ ತಾಲೂಕಿನ ತಲಾ ಒಬ್ಬರು ಅನ್ಯ ಕಾಯಿಲೆಯೊಂದಿಗೆ ಕೊರೋನ ಸೋಂಕಿಗೆ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 108ಕ್ಕೇರಿದೆ.

ಉಡುಪಿಯ 60ರ ಹರೆಯದ ವ್ಯಕ್ತಿ ನ್ಯುಮೋನಿಯಾ, ರಕ್ತದೊತ್ತಡ, ಹೃದಯ ಕಾಯಿಲೆಯೊಂದಿಗೆ ಉಸಿರಾಟದ ತೊಂದರೆಗೆ ಒಳಗಾಗಿದ್ದು ಮೃತಪಟ್ಟಿದ್ದಾರೆ. ಕುಂದಾಪುರದ 50ರ ಹರೆಯದ ಪುರುಷ ಸಹ ಕೊರೋನ ಗುಣಲಕ್ಷಣ ದೊಂದಿಗೆ ಕಿಡ್ನಿ ಸಮಸ್ಯೆ ಹಾಗೂ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತಿದ್ದರು ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News