ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ಧ ಪ್ರಕರಣ : ಆದಿತ್ಯ ರಾವ್ ಮಂಪರು ಪರೀಕ್ಷೆ ಪೂರ್ಣ

Update: 2020-09-04 14:52 GMT

ಮಂಗಳೂರು, ಸೆ. 4: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿರುವ ‘ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಜ.20ರಂದು ಬಾಂಬ್ ಇರಿಸಿದ್ದ ಆರೋಪಿ ಆದಿತ್ಯರಾವ್ (36)ನ ಮಂಪರು ಪರೀಕ್ಷೆಯು ಶುಕ್ರವಾರ ಪೂರ್ಣಗೊಂಡಿದೆ.

ಬೆಂಗಳೂರಿನ ಮಡಿವಾಳ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಗುರುವಾರ ಮತ್ತು ಶುಕ್ರವಾರ ಮಂಪರು ಪರೀಕ್ಷೆ ನಡೆಯಿತು. ಬಾಂಬ್ ಇರಿಸಿದ್ದ ಆರೋಪಿಯು ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದ. ಬಳಿಕ ಆತನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು.

ಮಂಗಳೂರು ಕಾರಾಗೃಹದಲ್ಲಿದ್ದ ಈತನ ವಿರುದ್ಧ ಪೊಲೀಸರು 700 ಪುಟಗಳ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಪೊಲೀಸರ ಕೆಲವೊಂದು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ದೊರೆಯದೆ ಇದ್ದ ಕಾರಣ ಮಂಪರು ಪರೀಕ್ಷೆಗಾಗಿ ನ್ಯಾಯಾಲಕ್ಕೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಮನವಿ ಪುರಸ್ಕರಿಸಿ ಮಂಪರು ಪರೀಕ್ಷೆಗೆ ಅನುಮತಿ ನೀಡಿತ್ತು. ಅದರಂತೆ ಆರೋಪಿಯನ್ನು ಮಂಗಳೂರು ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬೆಂಗಳೂರಿಗೆ ಕರೆದೊಯ್ದಿತ್ತು.

‘ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೆಲವೊಂದು ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರ ನೀಡಿದ್ದ. ಅದನ್ನು ಸ್ಪಷ್ಟ ಪಡಿಸಿಕೊಳ್ಳುವ ಉದ್ದೇಶದಿಂದ ಮಂಪರು ಪರೀಕ್ಷೆ ಅಗತ್ಯವಿತ್ತು. ಮಂಪರು ಪರೀಕ್ಷೆ ಮುಗಿದಿದ್ದು, ಆರೋಪಿಯನ್ನು ಮಂಗಳೂರಿಗೆ ಕರೆತರಲಾಗವುದು. ದೋಷಾರೋಪಣಾ ಪಟ್ಟಿ ಈಗಾಗಲೇ ಸಲ್ಲಿಕೆಯಾಗಿದ್ದರೂ ಇನ್ನಷ್ಟು ಮಾಹಿತಿ ಸೇರಿಸಿ ಹೆಚ್ಚುವರಿಯಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಲು ಅವಕಾಶವಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News