ಬೆಂಗಳೂರು: ನಶೆ ಮುಕ್ತ ರಾಜ್ಯವನ್ನಾಗಿಸಲು ಆಗ್ರಹಿಸಿ ಪ್ರತಿಭಟನೆ

Update: 2020-09-04 18:14 GMT

ಬೆಂಗಳೂರು, ಸೆ.4: ರಾಜ್ಯವನ್ನು ನಶೆ ಮುಕ್ತವಾಗಿ ಮಾಡಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಮಹಾತ್ಮಾಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿ ಹರಡಿದ್ದು ಆತಂಕಕಾರಿ ಸಂಗತಿಗಳು ಒಂದರ ನಂತರ ಒಂದರಂತೆ ಹೊರಬರುತ್ತಿವೆ. ಡ್ರಗ್ಸ್ ಜಾಲದಲ್ಲಿ ಸಿನಿಮಾ ನಟ-ನಟಿಯರು, ರಾಜಕಾರಣಿಗಳ ಮಕ್ಕಳು, ವಿದ್ಯಾರ್ಥಿಗಳು ಇರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಬೇಕು ಎಂದು ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದರು.

ನಗರದ ಅಪಾರ್ಟ್‍ಮೆಂಟ್‍ವೊಂದರ ಮೇಲೆ ನಡೆದ ದಾಳಿಯಲ್ಲಿ ಮೂವರು ಡ್ರಗ್ಸ್ ಪೆಡ್ಲರ್‍ಗಳನ್ನು ಎನ್‍ಸಿಬಿ ಅಧಿಕಾರಿಗಳು ಬಂಧನಕ್ಕೆ ಒಳಪಡಿಸುತ್ತಾರೆ. ಇವರು ನೀಡಿದ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಡ್ರಗ್ಸ್ ಗೆ ಸ್ಯಾಂಡಲ್‍ವುಡ್ ನಂಟಿನ ಬಗ್ಗೆ ತಿಳಿದುಬಂದಿದೆ. ತನಿಖೆಯ ಮುಂದುವರಿದ ಭಾಗವಾಗಿ ಸ್ಯಾಂಡಲ್ ವುಡ್ ನಟಿ ರಾಗಿಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಡ್ರಗ್ಸ್ ಜಾಲದಲ್ಲಿ ಕೇವಲ ಸಿನಿಮಾ ನಟ ನಟಿಯರು ಮಾತ್ರವಲ್ಲ, ರಾಜಕಾರಣಿಗಳು ಮಕ್ಕಳು, ಶ್ರೀಮಂತರು ಹಾಗೂ ವಿದ್ಯಾರ್ಥಿಗಳು ಕೂಡಾ ಇದ್ದಾರೆ ಎಂಬ ಮಾಹಿತಿ ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಸಂಘಟನೆಯ ಕಾರ್ಯಕರ್ತರು ಆಗ್ರಹಪಡಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಆಗ್ರಹ: ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲೂ ಬಹುದೊಡ್ಡ ಚರ್ಚಾ ವಿಚಾರವಾಗಿದೆ. ಹಲವರು ಡ್ರಗ್ಸ್ ಮುಕ್ತಗೊಳಿಸಲು ಸರಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆ ನೆಪಮಾತ್ರ ತನಿಖೆಯನ್ನು ನಡೆಸಬಾರದು ಎಂದು ಆಗ್ರಹಿಸಿದ್ದಾರೆ. ಈ ನಡುವೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ಡ್ರಗ್ಸ್ ಮಾಫಿಯಾದಲ್ಲಿ ಯಾರೆಲ್ಲಾ ಇದ್ದಾರೆ ಅಂಥವರ ವಿರುದ್ಧ ಗಂಭೀರ ಸ್ವರೂಪದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಹೆಜ್ಜೆಯನ್ನು ಇಡಬೇಕಾಗಿದೆ. ಡ್ರಗ್ಸ್ ಮಾಫಿಯಾದ ಮೂಲ ಬೇರನ್ನು ಪತ್ತೆ ಹಚ್ಚಬೇಕಾಗಿದೆ ಎಂಬ ಆಗ್ರಹವೂ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News