ಉಡುಪಿ ಜಿಲ್ಲೆಯ ಎಲ್ಲಾ 82 ಐಸಿಯು ಬೆಡ್ ಭರ್ತಿ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-09-05 16:17 GMT

ಉಡುಪಿ, ಸೆ.5: ಕೋವಿಡ್‌ನ ಗುಣಲಕ್ಷಣಗಳು ಕಾಣಿಸಿಕೊಂಡರೂ ನಿರ್ಲಕ್ಷ್ಯ ಧೋರಣೆಯಿಂದ ತೀರಾ ವಿಳಂಬವಾಗಿ, ಗಂಭೀರ ಸ್ಥಿತಿಯಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲೆಯ ನಿಗದಿತ ಎಲ್ಲಾ 82 ಐಸಿಯು ಬೆಡ್‌ಗಳು ಭರ್ತಿಯಾಗಿದ್ದು, ಇನ್ನು ತುರ್ತು ಅಗತ್ಯವಿರುವವರಿಗೆ ಬೆಡ್ ಸಿಗದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಶನಿವಾರ ಸಂಜೆ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯ ಜನತೆ ಕೋವಿಡ್ ಪರೀಕ್ಷೆಗೆ ಹಿಂದೇಟು ಹಾಕುತ್ತಿರುವುದು ಹಾಗೂ ಕೋವಿಡ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯು ತ್ತಿರುವುದರಿಂದ ಕೊರೋನ ನಿಯಂತ್ರಣದಲ್ಲಾಗುತ್ತಿರುವ ಹಿನ್ನಡೆಯ ಕುರಿತು ಅವರು ಕಳವಳ ವ್ಯಕ್ತಪಡಿಸಿದರು.

ಸರಕಾರಿ ವ್ಯವಸ್ಥೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಬಂದು ಗಂಭೀರ ಸ್ಥಿತಿಗೆ ತಲುಪಿದ ರೋಗಿ ಗಳ ಚಿಕಿತ್ಸೆಗೆ ಒಟ್ಟು 82 ಐಸಿಯು ಬೆಡ್‌ಗಳನ್ನು ನಿಗದಿ ಪಡಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಈ ಎಲ್ಲಾ ಬೆಡ್‌ಗಳು ಭರ್ತಿಯಾಗಿವೆ. ಇನ್ನು ಗಂಭೀರ ಸ್ಥಿತಿಯಲ್ಲಿ ಐಸಿಯು ಅನಿವಾರ್ಯತೆಯೊಂದಿಗೆ ಬರುವವರಿಗೆ ಹಾಸಿಗೆ ಲಭ್ಯವಿಲ್ಲ ಎಂದವರು ನುಡಿದರು.

ತುರ್ತು ಚಿಕಿತ್ಸೆಯ ಅಗತ್ಯವಿರುವವರಿಗೆ ಮಂಗಳೂರಿಗೆ ಕಳುಹಿಸಿದರೂ ಅಲ್ಲಿ ಸಹ ಐಸಿಯು ಲಭ್ಯವಿಲ್ಲ. ಮಣಿಪಾಲಕ್ಕೆ ಹೊರ ಜಿಲ್ಲೆಯಿಂದ ಬಂದ ರೋಗಿಗಳನ್ನು ಸಹ ಹಿಂದಕ್ಕೆ ಕಳುಹಿಸಲಾಗಿದೆ. ಇವೆಲ್ಲವೂ ಕೊನೆಯ ಕ್ಷಣದಲ್ಲಿ ಪಾಸಿಟಿವ್ ಬಂದ ರೋಗಿಗಳು ಚಿಕಿತ್ಸೆಗೆ ಬರುತ್ತಿರುವುದೇ ಕಾರಣ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಲಭ್ಯ 82 ಐಸಿಯು ಬೆಡ್‌ಗಳಲ್ಲಿ ಜಿಲ್ಲೆಯ 66 ಮಂದಿ ಹಾಗೂ ಹೊರ ಜಿಲ್ಲೆಯ 16 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಕೋವಿಡ್ ರೋಗ ಲಕ್ಷಣ ಕಾಣಿಸಿಕೊಂಡಾಗಲೇ ಪರೀಕ್ಷೆ ಹಾಗೂ ಚಿಕಿತ್ಸೆಗೆ ಬರುತ್ತಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಹೀಗೆ ಕೊನೆಯ ಕ್ಷಣದಲ್ಲಿ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಕೊರೋನದಿಂದಾಗುವ ಸಾವಿನ ಸಂಖ್ಯೆಯೂ ಇದೀಗ ಹೆಚ್ಚುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದರು.

ಕೋವಿಡ್-19ರ ಕುರಿತಂತೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ವಾಗುವ ಅಪಪ್ರಚಾರಗಳಿಗೆ ಸಾರ್ವಜನಿಕರು ಕಿವಿಗೊಡದೇ, ಜ್ವರ, ಶೀತ, ಕೆಮ್ಮು ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷಿಸಿಕೊಳ್ಳಬೇಕು. ಆ ಮೂಲಕ ಜಿಲ್ಲೆಯಲ್ಲಿ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ಜಿ.ಜಗದೀಶ್ ಮನವಿ ಮಾಡಿದರು.

ಕೋವಿಡ್-19 ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಸುದ್ದಿಗಳನ್ನು ನಂಬಿ, ಸಾರ್ವಜನಿಕರು ರೋಗ ಲಕ್ಷಣಗಳಿದ್ದರೂ ಕೋವಿಡ್ ಪರೀಕ್ಷೆಗೆ ಒಳಪಡುತ್ತಿಲ್ಲ. ಮನೆಯಲ್ಲಿಯೇ ಮನೆ ಮದ್ದು ಮತ್ತು ಇತರೆ ಮಾತ್ರೆ ಗಳನ್ನು ಸೇವಿಸುತಿದ್ದು, ಇದರಿಂದ ಯಾವುದೇ ರೋಗ ಲಕ್ಷಣಗಳಿಲ್ಲದವರೂ ಇತರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗ ಹರಡುತ್ತಿದ್ದಾರೆ. ಹೀಗಾಗಿಯೇ ಜಿಲ್ಲೆಯ ಹಿರಿಯ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಗೀಡಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿಷಾದ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 12334 ಮಂದಿ ಕೋವಿಡ್ ಸೋಂಕಿತರಾಗಿದ್ದು, ಇವರಲ್ಲಿ ಈವರೆಗೆ 105 ಮಂದಿ ಮರಣಹೊಂದಿದ್ದಾರೆ. 55ರಿದ 64 ವಯೋಮಿತಿಯ 1315 ಸೋಂಕಿತರಲ್ಲಿ 25 ಮಂದಿ (ಶೇ.1.90) ಮತ್ತು 65 ವರ್ಷ ಮೇಲ್ಪಟ್ಟ 1161 ಕೋವಿಡ್ ಸೋಂಕಿತರಲ್ಲಿ 51 ಮಂದಿ (ಶೇ.4.39) ಮರಣಹೊಂದಿದ್ದಾರೆ. ಜಿಲ್ಲೆಯ ಒಟ್ಟಾರೆ ಮರಣ ಪ್ರಮಾಣ ಶೇ.0.86 ಆಗಿದೆ ಎಂದವರು ತಿಳಿಸಿದರು.

 ಸಾರ್ವಜನಿಕರು ಜ್ವರ, ಶೀತ, ಕೆಮ್ಮು ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಮನೆಯಲ್ಲಿರುವ ಹಿರಿಯ ಜೀವಗಳನ್ನು ಉಳಿಸಲು ಸಾಧ್ಯವಿದೆ. ರೋಗಲಕ್ಷಣಗಳಿದ್ದು ಮನೆಯಲ್ಲಿಯೇ ಇದ್ದು ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡುವುದು ಕಷ್ಟವಾಗಲಿದೆ ಎಂದು ಡಿಸಿ ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತಿದ್ದ ವೇಳೆ ಶೀಘ್ರದಲ್ಲಿ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡುತ್ತಿದ್ದುದರಿಂದ ಸಾವಿನ ಪ್ರಮಾಣ ಕಡಿಮೆ ಇತ್ತು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್-19 ಕುರಿತು ಪ್ರಸಾರವಾದ ಅಪಪ್ರಚಾರದಿಂದ, ಸಾರ್ವಜನಿಕರಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಸಂಖ್ಯೆ ಕಡಿಮೆಯಾಗಿದ್ದು, ಇದರಿಂದಾಗಿ ಕೋವಿಡ್ ಸೋಂಕಿತರು ಆರೋಗ್ಯವಾಗಿ ದ್ದರೂ ರೋಗವನ್ನು ಸಮಾಜದ ಹಿರಿಯ ಜೀವ ಗಳಿಗೆ ಹರಡುತ್ತಿರುವುದರಿಂದ ಹಾಗೂ ರೋಗ ಲಕ್ಷಣವಿದ್ದವರು ರೋಗ ಉಲ್ಬಣಗೊಂಡಗೊಂಡ ನಂತರ ಚಿಕಿತ್ಸೆಗಾಗಿ ನೇರ ಐಸಿಯು ಬೆಡ್‌ಗೆ ದಾಖಲಾ ಗುತ್ತಿರುವುದರಿಂದ ವೈದ್ಯರ ಪ್ರಾಮಾಣಿಕ ಪ್ರಯತ್ನದ ಹೊರತಾಗಿಯೂ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಜಿಲ್ಲಾಧಿಕಾರಿ ಕಳವಳ ವ್ಯಕ್ತಪಡಿಸಿದರು.

ಪ್ರಕರಣದ ಎಚ್ಚರಿಕೆ: ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಪರೀಕ್ಷೆಗೆ ನಿರಾಕರಿಸಿದರೆ ಅವರ ವಿರುದ್ದ ಎಪಿಡಮಿಕ್ ಕಾಯ್ದೆಯನ್ವಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ ಜಿಲ್ಲಾದಿಕಾರಿ ಜಿ.ಜಗದೀಶ್, ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವವರ ಕುರಿತು ಸಹ ಕ್ರಮ ಕೈಗೊಳ್ಳಲಾಗುವುದು, ಈಗಾಗಲೇ 3 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.

ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ಸುದೀರ್‌ಚಂದ್ರ ಸೂಡಾ, ಜಿಪಂ ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಕೋವಿಡ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೈದ್ಯ ಡಾ. ಶಶಿಕಿರಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News