ಕೋವಿಡ್‌-19 ಸಂಕಷ್ಟದಿಂದ ಆರ್ಥಿಕವಾಗಿ ಚೇತರಿಸಿಕೊಂಡ ಏಕೈಕ ರಾಜ್ಯ ಕರ್ನಾಟಕ: ಡಿಸಿಎಂ

Update: 2020-09-06 04:39 GMT

ಬೆಂಗಳೂರು, ಸೆ.6: ಕೋವಿಡ್‌-19 ಸಂಕಷ್ಟದಿಂದ ಚೇತರಿಸಿಕೊಂಡು ಆರ್ಥಿಕವಾಗಿ ಮತ್ತೆ ಸಹಜಸ್ಥಿತಿಗೆ ಮರಳಿರುವ ದೇಶದ ಏಕೈಕ, ಮುಂಚೂಣಿಯ ರಾಜ್ಯ ಕರ್ನಾಟಕವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದ್ದಾರೆ.

ಶನಿವಾರ ಅಮೆರಿಕದ ಕನ್ನಡ ಒಕ್ಕೂಟಗಳ ಸಂಘಟನೆ ʼಅಕ್ಕʼ ಏರ್ಪಡಿಸಿದ್ದ ಅಕ್ಕ ವರ್ಚುಯಲ್‌ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಡೀ ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೋವಿಡ್‌ನಿಂದ ಕರ್ನಾಟಕ ಧೃತಿಗೆಟ್ಟಿಲ್ಲ. ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಸಾರಿಗೆ ಸೇರಿದಂತೆ ಎಲ್ಲ ಕ್ಷೇತ್ರಗಳು ಸಹಜಸ್ಥಿತಿಗೆ ಮರಳಿವೆ. ಕೋವಿಡ್‌ ಕಾಲದಲ್ಲೂ ತೆರಿಗೆ ಸಂಗ್ರಹದಲ್ಲೂ ರಾಜ್ಯ ಉತ್ತಮ ಸಾಧನೆ ಮಾಡಿದೆ ಎಂದರು.

ಒಂದೆಡೆ ಕೋವಿಡ್ ಜತೆ ಹೋರಾಟ ನಡೆಸುತ್ತಲೇ ಇನ್ನೊಂದೆಡೆ ಅಭಿವೃದ್ಧಿಯತ್ತ ಕೂಡ ರಾಜ್ಯ ಸರಕಾರ ಕೆಲಸ ಮಾಡಿತು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸೇರಿ ಕೆಲ ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಯಿತಲ್ಲದೆ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಮಾಮೂಲಿ ಸ್ಥಿತಿಗೆ ತರಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿತು ಎಂದು ಡಿಸಿಎಂ ಹೇಳಿದರು.

ರಾಷ್ಟ್ರೀಯ ಆವಿಷ್ಕಾರ ಮಿಷನ್:‌

ಈಗಾಗಲೇ ರಾಜ್ಯದಲ್ಲಿ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪನೆ ಮಾಡಿ ಐಟಿ-ಬಿಟಿ ಕ್ಷೇತ್ರಕ್ಕೆ ಶಕ್ತಿ ತುಂಬಲಾಗಿದೆ. ಅದೇ ರೀತಿ ಇಡೀ ದೇಶವನ್ನು ಬೆಂಗಳೂರು ಮೂಲಕ ನೋಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಮಿಷನ್ ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುವುದು ಎಂದರು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅತ್ಯಂತ ಉತ್ತಮ ವಾತಾವರಣವಿದೆ. ಇಂಥ ಅನುಕೂಲಕರ ಪರಿಸ್ಥಿತಿ ದೇಶದ ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ಕೇವಲ ಒಂದು ಅರ್ಜಿಯನ್ನು ಸಲ್ಲಿಸಿ ಕೈಗಾರಿಕೆ ಆರಂಭಿಸಬಹುದು. ನಂತರ ಅಗತ್ಯ ಒಪ್ಪಿಗೆಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲೇ ಪಡೆಯಬಹುದು. ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಹಿಂಜರಿಕೆ ಇಲ್ಲದೆ ಹೂಡಿಕೆ ಮಾಡಬಹುದು. ಅನಿವಾಸಿ ಕನ್ನಡಿಗರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಉದ್ಯಮದಲ್ಲಿ ಹೂಡಿಕೆಯ ವಿಷಯ ಬಂದರೆ ಕರ್ನಾಟಕ, ಅಮರಿಕದ ನಡುವೆ ಅತ್ಯುತ್ತಮ ಅವಗಾಹನೆ ಇದೆ ಎಂದು ಡಿಸಿಎಂ ವಿವರಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೃಹತ್‌ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಮುಂತಾದವರು ಪಾಲ್ಗೊಂಡು ಮಾತನಾಡಿದರು.

ಅಕ್ಕ ಒಕ್ಕೂಟದ ಅಧ್ಯಕ್ಷ ತುಮಕೂರು ದಯಾನಂದ್‌, ಅಕ್ಕ ಚೇರ್‌ಮನ್‌ ಅಧ್ಯಕ್ಷ ಅಮರನಾಥ ಗೌಡ ಅಮೆರಿಕದಲ್ಲೇ ಕಾರ್ಯಕ್ರಮದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News