ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಧಾರ್ಮಿಕ ರಾಯಭಾರಿ: ಶ್ರೀ ಚಂದ್ರಶೇಖರ ಸ್ವಾಮೀಜಿ

Update: 2020-09-06 05:33 GMT

ಬೆಂಗಳೂರು, ಸೆ.6: ಇಂದು ನಿಧನರಾದ ಕಾಸರಗೋಡು ಜಿಲ್ಲೆಯ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸರಕಾರದ ಕಾನೂನು ಪ್ರಶ್ನಿಸಿ ಮಠಗಳ ಆಸ್ತಿ ರಕ್ಷಣೆ ಮಾಡಿದ ನಿಜವಾದ ಅರ್ಥದ ಧಾರ್ಮಿಕ ರಾಯಭಾರಿ. ಮಠಗಳ ಆಸ್ತಿಗಳನ್ನು ಕಾಪಾಡಿ ಇಂದಿಗೂ ಸನ್ಯಾಸಿಗಳು ಹಾಗೂ ಮಠವು ಸ್ವಾಭಿಮಾನ ಮುನ್ನಡೆಯುವಂತೆ ಮಾಡಿದವರು ಎಂದು ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಧಾರ್ಮಿಕ ಹಕ್ಕು, ಮಠಗಳನ್ನು ನಡೆಸಲು ಇರುವ ಹಕ್ಕು, ಸಮಾನತೆಯ ಹಕ್ಕು, ಆಸ್ತಿ ಹಕ್ಕು ಮುಂತಾದ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಇದೀಗ ಅವರ ನಿಧನದಿಂದ ಪ್ರಮುಖ ಯತಿ, ಮಾರ್ಗದರ್ಶಕರನ್ನು ಸಮಾಜ ಕಳೆದುಕೊಂಡಂತಾಗಿದೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಶವಾನಂದ ಸ್ವಾಮೀಜಿಯವರ ಹೆಸರು ಚಿರಸ್ಥಾಯಿಯಾಗಿದೆ. ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ ಪ್ರಕರಣ ಭಾರಿ ಪ್ರಸಿದ್ಧಿ ಪಡೆದಿತ್ತು. ದೇಶದಲ್ಲಿ ಸಂಚಲನ ಉಂಟು ಮಾಡಿದ್ದ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅತೀ ಅಪರೂಪ ಎಂಬಂತೆ 13 ಮಂದಿ ನ್ಯಾಯಾಧೀಶರ ಪೀಠ ರಚಿಸಿ ಕೈಗೊಂಡಿತ್ತು.

ಮಠ ಸಂಸ್ಥಾನಗಳ ಭೂ ಸಂಪತ್ತನ್ನು ಸರಕಾರಗಳು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಏಕಾಂಗಿ ಕಾನೂನು ಹೋರಾಟ ನಡೆಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಜಯಿಸಿ ದೇಶದ ಕಾನೂನು ಪಠ್ಯದಲ್ಲಿ ಶಾಶ್ವತ ಸ್ಥಾನ ಪಡೆದ ಸನ್ಯಾಸಿಯಾಗಿದ್ದಾರೆ ಎಡನೀರು ಸ್ವಾಮೀಜಿ.  ಎಷ್ಟೇ ಸವಾಲು ಕಷ್ಟ ಎದುರಾದರೂ ಗಡಿನಾಡು ಕಾಸರಗೋಡಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಿ ದಶಕಗಳಿಂದ ಮುನ್ನಡೆಸಿಕೊಂಡು ಬಂದ ಕನ್ನಡದ ನಿಜವಾದ ಪ್ರೇಮಿ ಕೂಡಾ ಹೌದು ಎಂದು ಶ್ರೀ ಚಂದ್ರಶೇಖರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News