ಸೆ.7ರಂದು ರಾಜ್ಯಕ್ಕೆ‘ಮಳೆ-ನೆರೆ’ ಕೇಂದ್ರ ಅಧ್ಯಯನ ತಂಡ

Update: 2020-09-06 11:33 GMT

ಬೆಂಗಳೂರು, ಸೆ.6: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿಯ ಪರಿಶೀಲನೆಗೆ ಕೇಂದ್ರದ ಹಿರಿಯ ಅಧಿಕಾರಿ ಕೆ.ಬಿ.ಪ್ರತಾಪ್ ನೇತೃತ್ವದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಲಿದ್ದು, ಸೆ.7ರಂದು ಮೂರು ದಿನಗಳ ಕಾಲ ರಾಜ್ಯದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಲಿದೆ.

ಹೊಸದಿಲ್ಲಿಯಿಂದ ಆಗಮಿಸಲಿರುವ ಆರು ಮಂದಿ ಅಧಿಕಾರಿಗಳ ಅಧ್ಯಯನ ಕೇಂದ್ರ ತಂಡ ಮೊದಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರೊಂದಿಗೆ ಚರ್ಚಿಸಲಿದ್ದು, ಸೋಮವಾರ ಮತ್ತು ಮಂಗಳವಾರ ಕೊಡಗು ಮತ್ತು ಬೆಳಗಾವಿ ಜಿಲ್ಲೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದೆ. ಬುಧವಾರ ಬೆಂಗಳೂರಿಗೆ ಹಿಂದಿರುಗಲಿದ್ದು, ಕಂದಾಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ನೆರವಿಗೆ ಮನವಿ: ರಾಜ್ಯದಲ್ಲಿನ ಮಳೆ ಮತ್ತು ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಗಿರುವ ಹಾನಿಗೆ ತಕ್ಷಣವೇ 4,800 ಕೋಟಿ ರೂ.ಗಳ ನೆರವು ಬಿಡುಗಡೆ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಸಲ್ಲಿಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ. ಕೇಂದ್ರ ತಂಡದ ವರದಿಯನ್ನು ಆಧರಿಸಿ ರಾಜ್ಯದಲ್ಲಿಮ ಪ್ರವಾಹದ ಹಾನಿಗೆ ಕೇಂದ್ರ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News