ದ.ಕ. ಜಿಲ್ಲೆ : ಕೋವಿಡ್‌ಗೆ ಮತ್ತೆ ಎಂಟು ಬಲಿ, ಹೊಸದಾಗಿ 152 ಮಂದಿಗೆ ಸೋಂಕು

Update: 2020-09-07 14:29 GMT

ಮಂಗಳೂರು, ಸೆ. 7: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಾವು ಪ್ರಕರಣ ಹೆಚ್ಚುತ್ತಿದ್ದು, ಸೋಮವಾರ ಮತ್ತೆ ಎಂಟು ಮಂದಿಯನ್ನು ಬಲಿ ಪಡೆದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 409ಕ್ಕೆ ಏರಿಕೆಯಾಗಿದೆ. ಹೊಸದಾಗಿ 152 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಮೃತಪಟ್ಟವರೆಲ್ಲ ಕೊರೋನ ಸೋಂಕಿನ ಜೊತೆಗೆ ವಿವಿಧ ರೋಗಗಳಿಂದ ಬಳಲುತ್ತಿದ್ದರು. ಮೃತರ ಪೈಕಿ ಮಂಗಳೂರು ತಾಲೂಕಿನ ಮೂವರು, ಪುತ್ತೂರು ತಾಲೂಕಿನ ಓರ್ವ ಸೇರಿದಂತೆ ಹೊರಜಿಲ್ಲೆಯ ನಾಲ್ವರು ಇದ್ದಾರೆ.

152 ಮಂದಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಹಲವು ದಿನಗಳಿಂದ ಏರುಗತಿಯಲ್ಲಿದ್ದ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಸೋಮವಾರ ತೀರಾ ಇಳಿಮುಖ ಕಂಡಿದೆ. 300ರಿಂದ 400ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ 152ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಗುಣಮುಖ ರಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮಂದಹಾಸದ ನಗೆ ಬೀರುವಂತಾಗಿದೆ. ಆದರೆ, ಕೊರೋನದಿಂದ ಮೃತಪಡುತ್ತಿರುವವರ ಸಂಖ್ಯೆ ಏರುತ್ತಲೇ ಇರುವುದು ಕಳವಳಕಾರಿಯಾಗಿದೆ.

ಜಿಲ್ಲೆಯಲ್ಲಿ ಸೋಮವಾರ 152 ಮಂದಿಯಲ್ಲಿ ಕೊರೋನ ಸೋಂಕು ಇರುವುದು ಪತ್ತೆಯಾಗಿದೆ. ಈ ಪೈಕಿ ಸಾಮಾನ್ಯ ಶೀತ ಲಕ್ಷಣ ಹೊಂದಿದ 65 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ನಿಗೂಢ ಪ್ರಕರಣದಲ್ಲಿ 83 ಮಂದಿ, ತೀವ್ರ ಉಸಿರಾಟ ತೊಂದರೆಯ ನಾಲ್ವರಲ್ಲಿ ಪಾಸಿಟಿವ್ ವರದಿ ಬಂದಿದೆ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 15,078ಕ್ಕೆ ಏರಿಕೆಯಾಗಿದೆ.

47 ಪುರುಷರು, 22 ಮಹಿಳೆಯರು ಸೇರಿದಂತೆ 69 ಮಂದಿಯಲ್ಲಿ ಕೊರೋನ ಸೋಂಕಿನ ಲಕ್ಷಣಗಳಿವೆ. ಇನ್ನು, 46 ಪುರುಷರು, 37 ಮಹಿಳೆ ಯರು ಸಹಿತ 83 ಮಂದಿಯಲ್ಲಿ ಕೊರೋನ ಲಕ್ಷಣಗಳು ಕಂಡುಬಂದಿಲ್ಲವಾದರೂ ವರದಿಯು ಪಾಸಿಟಿವ್ ಬಂದಿದೆ. ಮಂಗಳೂರ ತಾಲೂಕಿನ 71, ಬಂಟ್ವಾಳ-32, ಪುತ್ತೂರು-18, ಸುಳ್ಯ-16, ಬೆಳ್ತಂಗಡಿ-9, ಹೊರಜಿಲ್ಲೆಯ ಆರು ಮಂದಿಯ ವರದಿಯು ಪಾಸಿಟಿವ್ ಎಂದು ಬಂದಿದೆ.

303 ಮಂದಿ ಗುಣಮುಖ: ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೋನ ಸೋಂಕಿತರು ಗುಣಮುಖರಾಗುತ್ತಿರುವುದು ಆಶಾದಾಯಕ ವಾಗಿದೆ. ಸೋಮವಾರ ಒಂದೇದಿನ 313 ಮಂದಿ ಕೊರೋನಮುಕ್ತರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 239, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65, ಕೋವಿಡ್ ಆರೈಕೆ ಕೇಂದ್ರದಿಂದ ಒಂಬತ್ತು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಮುಕ್ತರಾದವರ ಸಂಖ್ಯೆ 11,754ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 1,07,145 ಮಂದಿಯ ಮಾದರಿಯನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 92,067 ಮಂದಿಯ ವರದಿಯು ನೆಗೆಟಿವ್ ಬಂದಿದ್ದು, ಇನ್ನುಳಿದ 15,078 ಮಂದಿಯ ವರದಿಯು ಪಾಸಿಟಿವ್ ಆಗಿದೆ. ಜಿಲ್ಲೆಯಲ್ಲಿ 2,915 ಸಕ್ರಿಯ ಪ್ರಕರಣಗಳಿವೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News