ಸೆ. 8: ಕೊಂಕಣಿ ಕೆಥೋಲಿಕರ ‘ಮೊಂತಿ ಫೆಸ್ಟ್’

Update: 2020-09-07 16:31 GMT

ಮಂಗಳೂರು, ಸೆ. 7: ಏಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮ ದಿನವನ್ನಾಗಿ ಕರಾವಳಿ ಕರ್ನಾಟಕದ ಕೊಂಕಣಿ ಕೆಥೋಲಿಕರು ಸೆ.8ರಂದು ‘ಮೋಂತಿ ಫೆಸ್ಟ್’ ಆಚರಿಸಲಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲೆಗಳ ಕೊಂಕಣಿ ಕೆಥೋಲಿಕರು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಟ ರೀತಿಯಲ್ಲಿ ಈ ಹಬ್ಬವನ್ನು ಆಚರಿಸು ತ್ತಾರೆ. ಮೇರಿ ಮಾತೆಯ ಜಯಂತಿಯ ಜತೆಗೆ ಕೌಟುಂಬಿಕ ಸಮ್ಮಿಲನದ ದಿನ, ಹೊಸ ಬೆಳೆಯ ಹಬ್ಬ ಹಾಗೂ ಹೆಣ್ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸೆಪ್ಟೆಂಬರ್ ಮಳೆಗಾಲದ ಕೊನೆಯ ಅವಧಿಯಾಗಿದ್ದು, ಈ ಸಂದರ್ಭ ಪ್ರಕೃತಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತದೆ. ಬೆಳೆಗಳು ಹುಲುಸಾಗಿ ಬೆಳೆದು, ನಳ ನಳಿಸಿ, ಕೊಯ್ಲಿಗೆ ಸಿದ್ಧವಾಗುತ್ತದೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು ವಿವಿಧ ಆಚರಣೆಗಳು ನಡೆಯುತ್ತವೆ. ಕರಾವಳಿಯ ಕೊಂಕಣಿ ಕೆಥೋಲಿಕರು ಪ್ರಕೃತಿಗೆ ವಿಶಿಷ್ಟ ರೀತಿಯಲ್ಲಿ ವಂದಿಸುತ್ತಾರೆ. ‘ಮೋಂತಿ ಫೆಸ್ಟ್’ ಆಗಿ ಸಂಭ್ರಮಿಸುತ್ತಾರೆ.

ಈ ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್‌ಗಳಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆಯ ಕಾರ್ಯಕ್ರಮ ಆ. 30 ರಂದು ಆರಂಭವಾಗಿದೆ. ನೊವೇನಾ ಪ್ರಾರ್ಥನೆಯ ವೇಳೆ ಪ್ರತಿ ದಿನ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ (ಬಾಲೆ ಮೇರಿಯ ಮೂರ್ತಿಗೆ) ಸಮರ್ಪಿಸಿ, ಗೀತೆಗಳನ್ನು ಹಾಡುವ ಮೂಲಕ ಸ್ತುತಿಸಿದ್ದಾರೆ.

ಕೊನೆಯ ದಿನ ಅಂದರೆ ಸೆ.8ರಂದು ಹಬ್ಬದ ಸಂಭ್ರಮ. ಚರ್ಚ್‌ಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ನಡೆಯುತ್ತದೆ.

ಮಂಗಳೂರು ಧರ್ಮ ಪ್ರಾಂತದ ಬಿಷಪ್ ಅತಿ ವಂ. ಪೀಟರ್ ಪಾವ್ಲ್ ಸಲ್ಡಾನ್ಹಾ ಬೆಳಗ್ಗೆ 8 ಗಂಟೆಗೆ ನಗರದ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಹಬ್ಬದ ಬಲಿ ಪೂಜೆಯನ್ನು ನಡೆಸುವರು. ಧರ್ಮ ಪ್ರಾಂತದ ಶ್ರೇಷ್ಠ ಗುರು ಮೊ. ಮ್ಯಾಕ್ಸಿಮ್ ಎಲ್. ನೊರೋನ್ಹಾ ಅವರು ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್ ಚಾಪೆಲ್‌ನಲ್ಲಿ ಬೆಳಗ್ಗೆ 7 ಗಂಟೆಯ ಬಲಿ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಧರ್ಮ ಪ್ರಾಂತದ ಎಲ್ಲಾ 124 ಚರ್ಚ್‌ಗಳಲ್ಲಿ ಬೆಳಗ್ಗೆ ಬಲಿ ಮೊಂತಿ ಹಬ್ಬದ ಬಲಿಪೂಜೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News