ಮಂಗಳೂರು: ಕೊರೋನ ಮಧ್ಯೆ ಸರಳತೆಗೆ ಸಾಕ್ಷಿಯಾದ ಮೊಂತಿ ಹಬ್ಬ

Update: 2020-09-08 10:03 GMT

ಮಂಗಳೂರು, ಸೆ.8: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೊಂತಿ ಹಬ್ಬ (ತೆನೆ ಹಬ್ಬ)ವನ್ನು ಕೊರೋನ ಹಿನ್ನೆಲೆಯಲ್ಲಿ ಇಂದು ಸರಳತೆಯೊಂದಿಗೆ ಆಚರಿಸಿದರು.

ಹಸಿರು ಹಾಗೂ ಸಮೃದ್ಧಿಯ ಪ್ರತೀಕವಾಗಿ ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮದಿನವಾದ ಸೆ. 8ನ್ನು ಮೊಂತಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಬಾರಿ ಕೊರೊನ ಹಿನ್ನೆಲೆಯಲ್ಲಿ ಅತ್ಯಂತ ಸರಳ ಹಾಗೂ ಮುಂಜಾಗೃತಾ ಕ್ರಮಗಳೊಂದಿಗೆ ದ.ಕ. ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ಬಲಿಪೂಜೆಯೊಂದಿಗೆ ಮೊಂತಿ ಹಬ್ಬವನ್ನು ಆಚರಿಸಲಾಯಿತು.

ಮಂಗಳೂರಿನ ರೊಸೋರಿಯೋ ಕೆಥಡ್ರಲ್‌ನಲ್ಲಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಬಲಿಪೂಜೆ ನೆರವೇರಿಸಿದರು. ಅವರು ಸಂದೇಶ ನೀಡಿ, ದೇವರು ಸೃಷ್ಟಿ ಹಾಗೂ ಮನುಜ ಕುಲವನ್ನು ವಿಶೇಷಿವಾಗಿ ಪ್ರೀತಿಸುತ್ತಾರೆ. ಇಂತಹ ಸೃಷ್ಟಿಯ ಪೋಷಣೆ ಜತೆಗೆ ಮನುಜ ಕುಲ ಅದರ ಉತ್ತಮ ನಿರ್ವಹಣೆಯನ್ನು ಮಾಡಬೇಕು ಎಂಬ ಸಂದೇಶ ಈ ಹಬ್ಬದ್ದಾಗಿದೆ ಎಂದರು.

ಕ್ರೈಸ್ತ ಸಮುದಾಯ ಪತ್ರಿಕೆ ಓದುವ ವಿಚಾರದಲ್ಲಿ ತೀರಾ ಹಿಂದಿದೆ. ಯಾವುದೇ ಭಾಷೆಯ ಪತ್ರಿಕೆಗಳು ಇರಲಿ ಅದನ್ನು ಓದುವ ಪ್ರವೃತ್ತಿ ಬೆಳೆಸಬೇಕು. ಈ ಮೂಲಕ ಜ್ಞಾನ ಸಂಪಾದನೆ, ಸಮಾಜದಲ್ಲಿ ನಡೆಯುವ ವಿಚಾರಗಳ ಅರಿವು, ಸರಕಾರದ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಅದನ್ನು ಸಮುದಾಯದಲ್ಲಿ ಬಳಸಿಕೊಳ್ಳುವ ಕೆಲಸವಾಬೇಕು ಎಂದು ಅವರು ಹೇಳಿದರು.

ಬಲಿಪೂಜೆಯಲ್ಲಿ ರೊಸಾರಿಯೊ ಕೆಥಡ್ರಲ್‌ನ ಪ್ರಧಾನ ಧರ್ಮಗೂರು ಫಾ. ಅಲ್ಪ್ರೆಡ್ ಪಿಂಟೋ, ಸಹಾಯಕ ಧರ್ಮಗುರುಗಳಾದ ಫಾ. ವಿನೋದ್ ಲೋಬೋ, ಫಾ. ವಿಕ್ಟರ್ ಡಿಸೋಜಾ, ಗ್ಲಾಡ್‌ಸಮ್ ಮೈನರ್ ಸೆಮಿನರಿಯ ರೆಕ್ಟರ್ ಫಾ. ಅನಿಲ್ ಐವನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಬಲಿಪೂಜೆಯ ಮೊದಲು ತೆನೆಯ ಆಶೀರ್ವಾದ ಹಾಗೂ ಮೇರಿ ಮಾತೆಗೆ ಪುಷ್ಪಾರ್ಚನೆ ನಡೆಸಲಾಯಿತು. ನಗರದ ಬಿಷಪ್ ಹೌಸ್‌ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಮೊನ್ಸಿಂಜರ್ ಮ್ಯಾಕ್ಸಿಂ ನೊರೊನ್ನಾ ಬಲಿಪೂಜೆ ನೆರವೇರಿಸಿದರು. ಮಂಗಳೂರಿನ ಜೆಪ್ಪುವಿನಲ್ಲಿರುವ ಸಂತ ಅಂತನಿ ಆಶ್ರಮದಲ್ಲಿ ಆಶ್ರಮದ ನಿರ್ದೇಶಕ ಫಾ. ಓನಿಲ್ ಡಿಸೋಜಾ, ಸಹಾಯಕ ನಿರ್ದೇಶಕರಾದ ಫಾ. ಅಲ್ಬನ್ ರಾಡ್ರಿಗಸ್, ಫಾ. ರೋಶನ್ ಡಿಸೋಜಾ ಉಪಸ್ಥಿರಿದ್ದರು.

ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ 124 ಚರ್ಚ್‌ಗಳಲ್ಲಿಯೂ ಸ್ಥಳೀಯ ಧರ್ಮಗುರುಗಳ ನೆೀತೃತ್ವದಲ್ಲಿ ಬಲಿ ಪೂಜೆ ನಡೆಯಿತು.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವರ್ಷ ಎಂದಿನಂತೆ, ಹೂವುಗಳನ್ನು ಮತ್ತು ಭತ್ತ ತೆನೆಯನ್ನು ವೆರವಣಿಗೆಯಲ್ಲಿ ಕೊಂಡೊಯ್ಯುವ ಸಂಪ್ರದಾಯವನ್ನು ಕೊರೋನ ನಿಮಿತ್ತ ಕೈಬಿಡಲಾಯಿತು. ಬದಲಾಗಿ ಭಕ್ತರು ಒಂದೊದೇ ಹುವುಗಳನ್ನು ಕೊಂಡೊಯ್ಯು ಮೇರಿ ಮಾತೆಯ ಪ್ರತಿಮೆಗೆ ಅರ್ಪಿಸಿದರು. ಬಲಿಪೂಜೆಯ ಬಳಿಕ ತೆನೆ ಹಾಗೂ ಕಬ್ಬು ವಿತರಿಸಲಾಯಿತು.

ಚರ್ಚ್‌ನ ಒಳ ಪ್ರವೇಶಿಸುವ ಸಂಧರ್ಭ ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿತ್ತು. ಜತೆಗೆ ಥರ್ಮಲ್ ಸ್ಕಾನಿಂಗ್ ಕೂಡಾ ಮಾಡಲಾ ಯಿತು. ಏಕ ಕಾಲದಲ್ಲಿ ಹೆಚ್ಚು ಜನ ಸೇರುವುದನ್ನು ತಪ್ಪಿಸಲು ಎಲ್ಲಾ ಚರ್ಚ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಬಲಿ ಪೂಜೆಗಗಳನ್ನು ನಡೆಸಲಾಯಿತು. ಬಳಿಕ ಮಧ್ಯಾಹ್ನ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರು ಜತೆ ಸೇರಿ ಹೊಸ ಅಕ್ಕಿಯ ಊಟವನ್ನು ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News