ಯಕ್ಷಗಾನ ಪ್ರದರ್ಶನ, ಯಕ್ಷ ವೈದ್ಯ ಪುರಸ್ಕಾರ ಪ್ರದಾನ ಸಮಾರಂಭ

Update: 2020-09-08 16:24 GMT

ಮಂಗಳೂರು : ಬಾಲಯಕ್ಷಕೂಟ ಕದ್ರಿ  ವತಿಯಿಂದ ಎರಡು ದಿನಗಳ "ದ್ವಿದಿನ ಧೀಂಗಿಣ ಸಂಭ್ರಮ" ಯಕ್ಷಗಾನ ಪ್ರದರ್ಶನ ಮತ್ತು ಯಕ್ಷ ವೈದ್ಯ ಪುರಸ್ಕಾರ ಪ್ರದಾನ  ಸಮಾರಂಭ ನಡೆಯಿತು.

ಸಮಾರಂಭ ಉದ್ಘಾಟಿಸಿದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್.‌ ಪ್ರದೀಪ್‌ ಕುಮಾರ್‌ ಕಲ್ಕೂರ ಮಾತನಾಡಿ, ಕೊರೋನದಿಂದ ವಿಶ್ವದಲ್ಲಿ ಜಡತ್ವ ಆವರಿಸಿದೆ. ಹಿಂದೆ ಕೃಷ್ಣ ಪರಮಾತ್ಮ ಕೂಡಾ ವಿಶ್ವಕ್ಕೆ ಜಡತ್ವ ಆವರಿಸಿದಾಗ ಗೀತೆಯ ಮೂಲಕ ಜ್ಞಾನ ನೀಡಿದ. ಈಗ ಜಡತ್ವವನ್ನು ಕಲೆಯ ಮೂಲಕ ನಿವಾರಿಸಿಕೊಳ್ಳುವ ಪ್ರಯತ್ನ ಶ್ಲಾಘನೀಯ ಎಂದರು.

ಬಾಲಯಕ್ಷಕೂಟ ಗೌರವಾಧ್ಯಕ್ಷ ದಿನೇಶ್‌ ದೇವಾಡಿಗ ಕದ್ರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್ ಕದ್ರಿ, ಬಾಲಯಕ್ಷ ಕೂಟದ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ನವರಾತ್ರಿ ಸಮಿತಿ ಅಧ್ಯಕ್ಷ ವಿಷ್ಣುಮೂರ್ತಿ ಕುಳಾಯಿ, ನಮ್ಮಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೆರ, ಪತ್ರಕರ್ತರ ಸಂಘದ ಕೇಂದ್ರ‌ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಒಎಂಪಿಲ್ ಸಂಸ್ಥೆಯ ಎಚ್ ಆರ್ ವಿಭಾಗದ ಉಪಮಹಾ ಪ್ರಬಂಧಕ ಆರ್.ಕೆ. ರಾವ್. ಇದ್ದರು.

ಯಕ್ಷವೈದ್ಯ ಪುರಸ್ಕಾರ:

ಕೊರೋನ ಸಂಕಷ್ಟ ಕಾಲದಲ್ಲಿ ವಾರಿಯರ್ ರೀತಿ ಕೆಲಸ ಮಾಡುತ್ತಿರುವ ವೈದ್ಯರ ಪ್ರತಿನಿಧಿಯಾಗಿ  ತೆಂಕು, ಬಡಗು ತಿಟ್ಟಿನ ಸವ್ಯಸಾಚಿ ಕಲಾವಿದ, ಮಣಿಪಾಲ ಕೆ.ಎಂ.ಸಿ.ಯ  ಮಕ್ಕಳ ತಜ್ಞ ಡಾ. ಸುನೀಲ್‌ ಮುಂಡ್ಕೂರ್‌ ಅವರಿಗೆ ಯಕ್ಷ ವೈದ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ಸಂಚಾಲಕ ಕದ್ರಿ ರಾಮಚಂದ್ರ ಭಟ್‌ ಎಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸಮಾರೋಪ:

ಶನಿವಾರ ನಡೆದ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಪ್ರಧಾನ ಕಾಯದರ್ಶಿ ಪುರುಷೋತ್ತಮ ಭಂಡಾರಿ ಸಮಾರೋಪ ಭಾಷಣ ಮಾಡಿ,  ಹಲವು ಕಲೆಗಳ ಸಂಗಮವಾಗಿರುವ ಯಕ್ಷಗಾನವು ಕೊರೋನ ಕಾಲದಲ್ಲಿ ನಿಂತ ನೀರಾಗಬಾರದು. ನೇರಪ್ರಸಾರದ ಮೂಲಕ ಯಕ್ಷಗಾನ ಆಯೋಜಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್‌ ಕದ್ರಿ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಯಕ್ಷಗಾನವನ್ನು ಮಕ್ಕಳು, ಮಹಿಳೆಯರಿಗೆ ಉಚಿತವಾಗಿ‌ ಕಲಿಸಿ, ಅವರಿಗೆ ಉತ್ತಮ ವೇದಿಕೆ ಒದಗಿಸುವ ಮೂಲಕ ಯಕ್ಷ ಗುರು ಎಲ್ಲೂರು ಒಳ್ಳೆಯ ಕೆಲಸ ಮಾಡುತಿದ್ದಾರೆ ಎಂದರು.

ಗೌರವಾಧ್ಯಕ್ಷ ದಿನೇಶ್ ದೇವಾಡಿಗ ಕದ್ರಿ, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೆರ ಇದ್ದರು. ಯಕ್ಷಕೂಟದ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿ ದರು. ಒಎಂಪಿಲ್ ಎಚ್ ಆರ್ ವಿಭಾಗದ ಉಪಮಹಾ ಪ್ರಬಂಧಕ ಆರ್.ಕೆ.ರಾವ್ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.

ಯಕ್ಷಗಾನ

ಕದ್ರಿ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ ದಯಾನಂದ ಕೋಡಿಕಲ್ ಭಾಗವತಿಕೆಯಲ್ಲಿ ಮೊದಲನೇ ದಿನ ಬಾಲ ಯಕ್ಷಕೂಟ ಮತ್ತು ಮಹಿಳಾ ಯಕ್ಷಕೂಟ ವತಿಯಿಂದ ಗದಾಯುದ್ಧ, ಎರಡನೇ ದಿನ  ಯಕ್ಷಕೂಟವತಿಯಿಂದ ಬಬ್ರುವಾಹನ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News