ಐಟಿ ಕಚೇರಿ ಸ್ಥಳಾಂತರದಿಂದ ಜಿಲ್ಲೆಯ ಜನತೆಗೆ ದ್ರೋಹ : ಹರೀಶ್ ಕುಮಾರ್

Update: 2020-09-09 06:26 GMT

ಮಂಗಳೂರು, ಸೆ. 9: ಕಳೆದ ಆರು ವರ್ಷಗಳಿಂದ ಕೇಂದ್ರ ಸರಕಾರದ ಜಿಎಸ್‌ಟಿ, ನೋಟು ಅಮಾನ್ಯೀಕರಣ ಮೊದಲಾದ ನಿಲುವುಗಳಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಇದೀಗ ಜಿಲ್ಲೆಯಲ್ಲಿದ್ದ ಐಟಿ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸುವ ಮೂಲಕ ಜಿಲ್ಲೆಯ ಜನತೆಗೆ ದ್ರೋಹ ಬಗೆಯಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂನಿಂದ ಐಟಿ ಕಚೇರಿ ಸ್ಥಳಾಂತರ ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆಯ್ನುದ್ದೇಶಿಸಿ ಅವರು ಮಾತನಾಡಿದರು.

ಐಟಿ ಕಚೇರಿ ಸ್ಥಳಾಂತರಿಸುವ ಯತ್ನದೊಂದಿಗೆ ಬಿಜೆಪಿ ಸರಕಾರ ಜಿಲ್ಲೆಯ ನಾಲ್ಕು ಲಕ್ಷ ತೆರಿಗೆದಾರರಿಗೆ ಭಾರೀ ಅನ್ಯಾಯ ಮಾಡಿದೆ. ತಾನು ನಂಬರ್ ವನ್ ಸಂಸದ ಎಂದು ಸ್ವಯಂ ಘೋಷಿಸಿಕೊಂಡಿರುವ, ಬಿಜೆಪಿಯ ರಾಜ್ಯಾಧ್ಯಕರೂ ಆಗಿರುವ ನಳಿನ್ ಕುಮಾರ್ ಕಟೀಲ್‌ರವರಾಗಲಿ ಮೌನವಾಗಿದ್ದು, ಅವರು ರಾಜೀನಾಮೆ ನೀಡಬೇಕು ಎಂದರು. ಜಿಲ್ಲೆಯ ಏಳು ಮಂದಿ ಶಾಸಕರಾಗಲಿ ಈ ಬಗ್ಗೆ ಮೌನ ವಹಿಸುವ ಮೂಲಕ ಜಿಲ್ಲೆಯ ಜನರ ಸಂಕಷ್ಟಗಳನ್ನು ಕಡೆಗಣಿಸಿದ್ದಾರೆ ಎಂದು ಹರೀಶ್ ಕುಮಾರ್ ಆರೋಪಿಸಿದರು.

ಶಾಸಕ ಯು.ಟಿ.ಖಾದರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಜಿಲ್ಲೆಯಲ್ಲಿ ಯಾವುದೇ ಯೋಜನೆಗಳನ್ನು ತರುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಇರುವ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ, ಸ್ಥಳಾಂತರಿಸುವ ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲೇ ಕಾಲ ಕಳೆಯುತ್ತಿದೆ. ಜತೆಗೆ ಭಾವನಾತ್ಮಕ ವಿಚಾರಗಳಿಂದ ಜನರನ್ನು ಮಂತ್ರಮುಗ್ಧರನ್ನಾಗಿಸುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು.

ಮಾಜಿ ಶಾಸಕ ಜೆ.ಆರ್. ಲೋಲೊ ಮಾತನಾಡಿ, ಈಗಾಗಲೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಆರ್ಥಿಕತೆಯನ್ನು ಹಾಳುಗೆಡವಿದೆ. ಈ ಬಗ್ಗೆ ಅಂಧ ಭಕ್ತರು ಕಣ್ಣು ತೆರೆದು ನೋಡಬೇಕಾಗಿದೆ. ಹಿಂದೆ ಭತ್ತ ಬೆಳೆಯಲು ದ.ಕ. ಹಾಗೂ ಮಲೆನಾಡಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನೂ ನಿಲ್ಲಿಸಲಾಗಿದೆ. ಇಲ್ಲಿ ಹುಟ್ಟಿ ಬೆಳೆದು ಜಿಲ್ಲೆಯ ಆರ್ಥಿಕತೆಗೆ ಚೈತನ್ಯ ತುಂಬಿದ್ದ ಬ್ಯಾಂಕ್‌ಗಳನ್ನು ಇತರ ಬ್ಯಾಂಕ್‌ಗಳ ಜತೆ ವಿಲೀನಗೊಳಿಸಲಾಗಿದೆ. ಇದೀಗ ಜಿಲ್ಲೆಯ ಆರ್ಥಿಕತೆಗೆ ಸಹಕಾರಿಯಾಗಿದ್ದ ಐಟಿ ಕಚೇರಿಯನ್ನೂ ಸ್ಥಳಾಂತರಿಸುತ್ತಿರುವುದು ಖೇದಕರ. ಈ ಬಗ್ಗೆ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲವೆಂದಾದೆ ಏನರ್ಥ ಎಂದವರು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಭಯಚಂದ್ರ ಜೈನ್, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ,ಮುಖಂಡರಾದ ಸದಾಶಿವ ಉಳ್ಳಾಲ್, ಮುಹಮ್ಮದ್ ಮೋನು, ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ನೀರಜ್ ಪಾಲ್, ಬಿ.ಎಂ. ಅಬ್ಬಾಸ್ ಅಲಿ, ಅಪ್ಪಿ, ಟಿ.ಕೆ. ಸುಧೀರ್, ನಾಗೇಂದ್ರ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಅಭಿವೃದ್ಧಿಯ ಕಲ್ಪನೆಗೆ ಪೂರಕವಾಗಿ ಜಿಲ್ಲೆಯಲ್ಲಿ ಸ್ಥಾಪನೆಯಾಗಿದ್ದ ಐಟಿ ಕಚೇರಿಯನ್ನು ಸ್ಥಳಾಂತರಿಸುವುದು ಉದ್ದೇಶಪೂರ್ವಕ. ಈ ಮೂಲಕ ಅಭಿವೃದ್ಧಿಯನ್ನು ನಿಷ್ಕ್ರಿಯಗೊಳಿಸಿ ಜಿಲ್ಲೆಯನ್ನು ಕೋಮು ಪ್ರಚೋದಿತ ಜಿಲ್ಲೆಯನ್ನಾಗಿಸುವುದು ಬಿಜೆಪಿಯ ಅಜೆಂಡಾ.

- ಮಿಥುನ್ ರೈ, ಅಧ್ಯಕ್ಷರು, ಯುವ ಕಾಂಗ್ರೆಸ್, ದ.ಕ.

ದ.ಕ. ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿರುವಾಗ ಧ್ವನಿ ಎತ್ತದ ಸಂಸದರು, ಶಾಸಕರು ಇದ್ದೇನು ಪ್ರಯೋಜನ. ಈ ರೀತಿ ಜನರ ಸಂಕಷ್ಟಗಳಿಗೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಇದ್ದೂ ಸತ್ತಂತೆ.

- ಐವನ್ ಡಿಸೋಜ, ಮಾಜಿ ಸದಸ್ಯ, ವಿಧಾನ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News