ಕೇಂದ್ರ ಸಚಿವ ಕೈಲಾಶ್ ಚೌಧರಿಯನ್ನು ಭೇಟಿ ಮಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್

Update: 2020-09-09 11:08 GMT

ಬೆಂಗಳೂರು, ಸೆ. 9: ರಾಜ್ಯದಲ್ಲಿ ಜಲಾನಯನ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌದರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಬುಧವಾರ ಹೊಸದಿಲ್ಲಿಯ ಕೃಷಿ ಭವನದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಬಿ.ಸಿ.ಪಾಟೀಲ್, ರಾಜ್ಯದ ಕೃಷಿ ಅಭಿವೃದ್ಧಿಗಳ ಕುರಿತು ಚರ್ಚಿಸಿ, ರೈತ ಕಲ್ಯಾಣ ನಿಧಿಯಡಿಯಲ್ಲಿ ರಾಜ್ಯಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.

ವೈಜ್ಞಾನಿಕ ಜಲಾನಯನ ಯೋಜನೆ ಮತ್ತು ಅನುಷ್ಠಾನದ ಮೂಲಕ ಮಣ್ಣಿನ ಮತ್ತು ಜಲ ಸಂರಕ್ಷಣಾ ಚಟುವಟಿಕೆಗಳಂತಹ ಬರ ನಿವಾರಣಾ ಚಟುವಟಿಕೆಗಳನ್ನು ಕೈಗೊಳ್ಳಲು ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ-ಡಬ್ಲ್ಯೂಡಿಸಿ ಯೋಜನೆಯಡಿ ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಜಲಾನಯನ ಅಭಿವೃದ್ಧಿಗೆ 53 ಲಕ್ಷ ಹೆಕ್ಟೇರ್ ಪ್ರದೇಶ ಲಭ್ಯವಿದ್ದು, ಈ ಪೈಕಿ ಪ್ರತಿ ವರ್ಷ 5 ಲಕ್ಷ ಹೆಕ್ಟೇರ್ ಪ್ರದೇಶದಂತೆ ಕೇಂದ್ರ ಸರಕಾರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಕೈಲಾಶ್ ಚೌದರಿ, ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದು ಎಂದು ಭರವಸೆ ನೀಡಿದರು ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News