ಹಣ್ಣು-ತರಕಾರಿ ಮಾರಾಟಕ್ಕೆ ಸೌರಶಕ್ತಿ ಚಾಲಿತ ತ್ರಿಚಕ್ರ ಸೈಕಲ್ ವಿತರಣೆಗೆ ಸಿಎಂ ಚಾಲನೆ

Update: 2020-09-09 16:39 GMT

ಬೆಂಗಳೂರು, ಸೆ. 9: ಭಾರತೀಯ ತೋಟಗಾರಿಕಾ ಸಂಸ್ಥೆಯಿಂದ ಹಣ್ಣು-ತರಕಾರಿ ಮಾರಾಟ ಮಾಡುವ ಸೌರಶಕ್ತಿ ಚಾಲಿತ ಅರ್ಕಾ ತ್ರಿಚಕ್ರ ಸೈಕಲ್‍ಗಳನ್ನು ವಿತರಣೆ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದಿಲ್ಲಿ ಚಾಲನೆ ನೀಡಿದರು.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತ್ರಿಚಕ್ರ ಸೈಕಲ್ ವಿತರಣೆ ಮಾಡಿ ಮಾತನಾಡಿದ ಅವರು, ಪರಿಶಿಷ್ಟರಿಗೆ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಸೈಕಲ್ ವಿತರಣೆ ಮಾಡುತ್ತಿದ್ದು, ಇದು ಆತ್ಮನಿರ್ಭರ ಯೋಜನೆಗೆ ಪೂರಕವಾಗಿದೆ. ಭಾರತೀಯ ತೋಟಗಾರಿಕೆ ಸಂಸ್ಥೆಯೇ ಈ ಸೈಕಲ್ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.

ಉದ್ದೇಶಿತ ಯೋಜನೆಯಿಂದ ರಸ್ತೆ ಬದಿಯಲ್ಲಿ ಹಣ್ಣು-ತರಕಾರಿ ಮಾರಾಟಕ್ಕೆ ಅವಕಾಶವಾಗಲಿದೆ. ಇದರಿಂದ ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಸೌರಶಕ್ತಿಯಿಂದ ಸೈಕಲ್ ಚಾರ್ಜ್ ಮಾಡಿದರೆ ಸುಮಾರು 50 ಕಿಮೀ ವರೆಗೆ ನಿರಂತರವಾಗಿ ಸಂಚರಿಸಬಹುದು. ಇದರಿಂದ ವ್ಯಾಪಾರಕ್ಕೆ ಸಹಕಾರಿಯಾಗಲಿದೆ. ಅಲ್ಲದೆ, ಗುಣಮಟ್ಟ ಹಣ್ಣು-ತರಕಾರಿ ಸೂಕ್ತ ಸಮಯದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಸಂಶೋಧನೆಯಲ್ಲಿ ತೊಡಗಿದ್ದು, ಕೃಷಿಕರಿಗೆ ಅಗತ್ಯ ಮಾರ್ಗದರ್ಶನ ಮಾಡುತ್ತಿದೆ. ಇದರಿಂದ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುತ್ತಿದ್ದು, ಅಗ್ಗದ ದರದಲ್ಲಿ ಗ್ರಾಹಕರಿಗೆ ದೊರೆಯುವ ನಿಟ್ಟಿನಲ್ಲಿ ಸೌರಶಕ್ತಿ ತ್ರಿಚಕ್ರ ಸೈಕಲ್ ಸಹಕಾರಿ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್, ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News