ಕೆಂಪೇಗೌಡರಿಗೆ ಜಾತ್ಯತೀತವಾಗಿ ಗೌರವ ಸಲ್ಲಿಸಬೇಕು: ಡಿಸಿಎಂ ಅಶ್ವತ್ಥ ನಾರಾಯಣ್

Update: 2020-09-10 14:41 GMT

ಬೆಂಗಳೂರು, ಸೆ.10: ನಾಡಪ್ರಭು ಕೆಂಪೇಗೌಡರಿಗೆ ಜಾತ್ಯತೀತವಾಗಿ ಗೌರವ ಸಲ್ಲಿಸಬೇಕು ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೊರೋನ ಹಿನ್ನೆಲೆ ಸರಳವಾಗಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಕೆಂಪೇಗೌಡರು ಅಂದೇ 360 ಡಿಗ್ರಿಯಲ್ಲಿ ನಗರ ನಿರ್ಮಾಣ ಮಾಡಿದವರು. ಜನರು 500 ವರ್ಷಗಳ ನಂತರವೂ ನನ್ನನ್ನು ನೆನೆಸಿಕೊಳ್ಳುತ್ತಾರೆ ಎನ್ನುವ ಉದ್ದೇಶವಿಟ್ಟುಕೊಂಡು ಅವರು ಕೆಲಸ ನಿರ್ವಹಿಸಿಲ್ಲ. ಎಲ್ಲ ಜನರಿಗೂ ಅನುಕೂಲವಾಗಬೇಕು ಎನ್ನುವ ದೃಷ್ಟಿಯಿಂದ ಅವರು ಕೆಲಸವನ್ನು ನಿರ್ವಹಿಸಿದರು ಎಂದು ಹೇಳಿದರು.

ಇದೇ ದಿಕ್ಕಿನಲ್ಲಿ ನಮ್ಮ ಸರಕಾರ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿದ್ದೇವೆ. ಅಲ್ಲಿ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣವನ್ನು ಕೂಡ ಮಾಡಲಾಗುತ್ತಿದೆ. ಅದರ ಜೊತೆಗೆ 23 ಎಕರೆ ಸುಂದರ ಪಾರ್ಕ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಬೆಂಗಳೂರಿಗೆ ಬರುವ ಎಲ್ಲ ಪ್ರವಾಸಿಗರು ಅವರನ್ನು ದರ್ಶನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು ಸುತ್ತಮುತ್ತ ಇರುವ ಎಲ್ಲ ಕೋಟೆಗಳನ್ನು ಅಭಿವೃದ್ಧಿ ಮಾಡಲು ಸರಕಾರ ತೀರ್ಮಾನ ಮಾಡಿದೆ ಎಂದು ಹೇಳಿದರು.

ಮೇಯರ್ ಗೌತಮ್‍ಕುಮಾರ್ ಮಾತನಾಡಿ, ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದವರು ನಾಡಪ್ರಭು ಕೆಂಪೇಗೌಡರು. ಬೆಂಗಳೂರನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೆಂಪೇಗೌಡರ ಜಯಂತಿ ಅಂದರೆ ನಮಗೆ ಸಾಕಷ್ಟು ಸಂಭ್ರಮ. ಇದು ಪಾಲಿಕೆಯ ಹಬ್ಬ, ಹೀಗಾಗಿ ಅತ್ಯಂತ ವಿಜೃಂಭಣೆಯಿಂದ ಆಚರಿಕೊಂಡು ಬರುತ್ತಿದ್ದೇವೆ ಎಂದರು.

30 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಸಂಗೀತ ಕ್ಷೇತ್ರ: ವಿದ್ವಾನ್ ವೇಣುಗೋಪಾಲ್ ಎಚ್.ಎಸ್. ರಂಗಭೂಮಿ: ವಿನಯ್‍ ಚಂದ್ರ ಪಿ, ನೊಣವಿನಕೆರೆ ರಾಮಕೃಷ್ಣಯ್ಯ, ವಾಸ್ತುಶಿಲ್ಪ: ಯಶಸ್ವಿನಿ ಶರ್ಮಾ, ಸಾಹಿತ್ಯ: ಸಂತೋಷ್ ತಮ್ಮಯ್ಯ, ಜಯರಾಮ್, ಸಮಾಜ ಸೇವೆ: ಅಚ್ಯುತ್‍ ಗೌಡ, ವಿಜಯ್ ನಾಯಕ, ಡಾ. ವೆಂಕಟೇಶ್, ನಂದಿದುರ್ಗ ಬಾಲುಗೌಡ, ಜಯರಾಜ್, ಶಿವಪ್ರಸಾದ್ ಮಂಜುನಾಥ್, ರಾಕೇಶ್ ಸಿ.ಆರ್, ಎ.ಎನ್. ಕಲ್ಯಾಣಿ, ನಾಗರಾಜ್.

ವಿವಿಧ ಕ್ಷೇತ್ರ: ನಿತಿನ್‍ ಕಾಮತ್, ಲೆಫ್ಟಿನೆಂಟ್ ಜನರಲ್ ತಿಮ್ಮಯ್ಯ,  ಡಾ. ತಸ್ಲಿಮರಿಫ್ ಸೈಯದ್, ಡಾ. ಥಹಾ ಮತೀನ್, ಚಿತ್ರಕಲೆ: ಬಿ.ಕೆ.ಎಸ್ ವರ್ಮಾ, ಕ್ರೀಡೆ: ಕಾಮತ್, ನಾರಾಯಣ ಸ್ವಾಮಿ, ರಮ್ಯ ವಸಿಷ್ಠ, ಸರಕಾರಿ ಸೇವೆ: ಸುಬ್ರಮಣ್ಯ ಜೋಯಿಸ್, ಸುರೇಶ್, ಶ್ರುತಿ ಜಿ, ವೈದ್ಯಕೀಯ: ಡಾ.ಆಸೀಮ ಭಾನು, ಮೀನಾ ಗಣೇಶ್, ನೃತ್ಯ: ಪ್ರಶಾಂತ್‍ ಗೋಪಾಲ್ ಶಾಸ್ತ್ರಿ, ಯೋಗ: ಮಂಜುನಾಥ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News