ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಶಿಕ್ಷಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ

Update: 2020-09-11 17:53 GMT

ಬೆಂಗಳೂರು, ಸೆ. 11: ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹತ್ತು ಹಲವು ಸುಧಾರಣಾ ಕ್ರಮಗಳ ಮೂಲಕ ರಾಜ್ಯದಲ್ಲಿನ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ರೂಪಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಲೆಗಳಲ್ಲಿ ಶಿಕ್ಷಕರ ವಿರುದ್ಧ ಯಾವುದೇ ಕಳಂಕ ಬರಬಾರದು. ಇಲಾಖೆಯು ಶಿಕ್ಷಣ, ವಿದ್ಯಾರ್ಥಿ ಹಾಗೂ ಸಮುದಾಯ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.

ಯಾವುದೇ ಒಂದು ರಾಷ್ಟ್ರದ ಭವಿಷ್ಯದ ನಿರ್ಧಾರ ಆಗುವುದು ಶಾಲಾ ಕೊಠಡಿಯಲ್ಲಿ ಎಂಬ ಮಾತು ಸತ್ಯ. ಮಾನವ ಸಂಪನ್ಮೂಲ ಅಭಿವೃದ್ದಿಗೆ ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು ಎಂದು ಬಣ್ಣಿಸಿದ ಯಡಿಯೂರಪ್ಪ, ಶಿಕ್ಷಕ ವೃತ್ತಿಗೆ ಘನತೆ ತಂದುಕೊಟ್ಟ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರನ್ನು ಎಲ್ಲರೂ ನೆನಪು ಮಾಡಿಕೊಳ್ಳಲೇಬೇಕು ಎಂದು ಸ್ಮರಿಸಿದರು.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಆದರೆ, ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಆ ಮೂಲಕ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶಾಲೆಯಿಂದ ಮಕ್ಕಳು ದೂರ ಉಳಿಬೇಕಾದ ಈ ಅನಿವಾರ್ಯ ಸಂದರ್ಭದಲ್ಲಿ ಹೊಸ ರೂಪದ ಕಲಿಕಾ ವಿಧಾನವಾಗಿ ವಿದ್ಯಾಗಮ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಇದೇ ವೇಳೆ `ಉತ್ತಮ ಶಿಕ್ಷಕ ಪ್ರಶಸ್ತಿ' ಪಡೆದ ಜಾಲಹಳ್ಳಿ ಕೇಂದ್ರಿಯ ವಿದ್ಯಾಲಯದ ಮುಖ್ಯ ಶಿಕ್ಷಕಿ ಚೆಮ್ಮಲಾರ್ ಷಣ್ಮುಗಂ, ಮುಖ್ಯ ಶಿಕ್ಷಕಿ ಸುರೇಖಾ ಜಗನ್ನಾಥ್ ಹಾಗೂ ಬೆಳ್ತಂಗಡಿಯ ಯಾಕೂಬ್ ಎಸ್. ಅವರನ್ನು ಗೌರವಿಸಲಾಯಿತು. 2020-21ನೆ ಸಾಲಿನಲ್ಲಿ ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದಲ್ಲಿ 20 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ 10 ಶಿಕ್ಷಕರು ಹಾಗೂ ಇಬ್ಬರು ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್.ದೊರೆಸ್ವಾಮಿ, ಮೇಲ್ಮನೆ ಸದಸ್ಯರಾದ ನಾರಾಯಣಸ್ವಾಮಿ, ಅ.ದೇವೇಗೌಡ, ಅರುಣ್ ಶಹಾಪುರ, ಹನುಮಂತ ನಿರಾಣಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News