ಉಡುಪಿ: ಕೋವಿಡ್ ಚೇತರಿಕೆ ಪ್ರಮಾಣ ಶೇ.86.74ಕ್ಕೆ ಏರಿಕೆ
ಉಡುಪಿ, ಸೆ.13: ಕೋವಿಡ್-19ರ ಪರೀಕ್ಷೆಗೆ ಜನತೆ ಮುಂದೆ ಬರಲು ಮೀನಾಮೇಷ ತೋರುತ್ತಿರುವುದರ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ಕೊರೋನ ನಿರ್ವಹಣೆ ಉತ್ತಮವಾಗಿದೆ. ಸೋಂಕಿತರ ಚೇತರಿಕೆ ಪ್ರಮಾಣ ಉತ್ತಮವಾಗಿದೆ. ಆದರೆ ಸಾವಿನ ಪ್ರಮಾಣ ಕಳೆದೊಂದು ವಾರದಲ್ಲಿ ಹಠಾತ್ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ರವಿವಾರ ಸಂಜೆಯವರೆಗೆ ಒಟ್ಟು 14,038 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಲ್ಲಿ 8,063 ಪುರುಷರು (ಶೇ.57) ಹಾಗೂ 5,973 ಮಹಿಳೆಯರು (ಶೇ.43) ಸೇರಿದ್ದಾರೆ. ಚಿಕಿತ್ಸೆಯ ಬಳಿಕ ಇವರಲ್ಲಿ 12,176 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯ ಚೇತರಿಕೆ ಪ್ರಮಾಣ ಈಗ ಶೇ.86.74ಕ್ಕೇರಿದೆ. ರಾಷ್ಟ್ರ ಮತ್ತು ರಾಜ್ಯದ ಚೇತರಿಕೆಗೆ ಹೋಲಿಸಿದರೆ ಇದು ಉತ್ತಮ ಸಾಧನೆಯಾಗಿದೆ.
ಸದ್ಯ ದೇಶದ ಚೇತರಿಕೆ ಪ್ರಮಾಣ ಶೇ.77.9 ಆಗಿದ್ದರೆ, ಅದೇ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.77 ಆಗಿದೆ. ಉಡುಪಿ ಜಿಲ್ಲೆಯಲ್ಲೀಗ ಒಟ್ಟು 1,732 ಸಕ್ರಿಯ ಪ್ರಕರಣಗಳಿದ್ದು, ಇದರ ಪ್ರಮಾಣ ಒಟ್ಟು ಪ್ರಕರಣಗಳ ಶೇ.12.34 ಆಗಿದೆ. ಇದು ದೇಶದಲ್ಲಿ ಶೇ.20.5 ಆಗಿದ್ದರೆ, ರಾಜ್ಯದಲ್ಲಿ ಶೇ.22 ಆಗಿದೆ.
ಇನ್ನು ಕೋವಿಡ್‌ನಿಂದಾದ ಮರಣದ ವಿಷಯಕ್ಕೆ ಬಂದರೆ ರವಿವಾರದವರೆಗೆ ಜಿಲ್ಲೆಯಲ್ಲಿ ಒಟ್ಟು 130 ಮಂದಿ ಮೃತಪಟ್ಟಿದ್ದಾರೆ. ಇದರ ಪ್ರಮಾಣ ಶೇ.0.93 ಆಗಿದೆ. ದೇಶದ ಮರಣದ ಪ್ರಮಾಣ ಶೇ.1.7 ಆಗಿದ್ದರೆ, ರಾಜ್ಯದ್ದು ಶೇ.1.6 ಆಗಿದೆ.
ವಾರದಲ್ಲಿ 20 ಸಾವು: ಸೆ.2ರಂದು ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿದ ಬಳಿಕ ಒಂದೇ ವಾರದಲ್ಲಿ ಈ ಸಂಖ್ಯೆ 120ರ ಗಡಿ ದಾಟಿತ್ತು. ಇದೀಗ ಸೆ.13ಕ್ಕೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 130 ಆಗಿದೆ. ಅಂದರೆ 10 ದಿನಗಳಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ ಈ ಅವಧಿಯಲ್ಲಿ ಸುಮಾರು 13 ಮಂದಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ 24 ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ ಈವರೆಗೆ ಎಂಟು ಮಂದಿ ಮನೆಯಲ್ಲೇ ಮರಣ ಹೊಂದಿರುವುದೂ ಅಂಕಿಅಂಶಗಳಿಂದ ತಿಳಿದುಬಂದಿದೆ.
ಅಂದರೆ ಜಿಲ್ಲೆಯಲ್ಲಿ ಜನರು ಕೋವಿಡ್ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ರೋಗದ ಗುಣಲಕ್ಷಣ ಇರುವವರು ಸಹ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ರೋಗ ತೀರಾ ಉಲ್ಬಣಗೊಂಡಾಗಲಷ್ಟೇ ಕೊನೆ ಕ್ಷಣದಲ್ಲಿ ಆಸ್ಪತ್ರೆಯ ಬಾಗಿಲು ತಟ್ಟುತ್ತಿದ್ದು, ಇದು ಅವರು ಗುಣಮುಖರಾಗುವ ಅವಕಾಶವನ್ನು ಕಸಿದುಕೊಳ್ಳುತ್ತಿದೆ. ಅದರಲ್ಲೂ 55 ವರ್ಷ ಮೇಲ್ಪಟ್ಟವರಲ್ಲಿ ಈ ಮನೋಭಾವ ದುಬಾರಿ ಪರಿಣಾಮವನ್ನು ಬೀರುತ್ತಿರುವುದು ಅಂಕಿಅಂಶ ಗಳಿಂದ ಸ್ಪಷ್ಟವಾಗುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದ 130 ಮಂದಿಯಲ್ಲಿ 52 ಮಂದಿ 11ರಿಂದ 60 ವರ್ಷದೊಳಗಿನ (ಶೇ.40) ಪ್ರಾಯದವರು. ಉಳಿದ 78 ಮಂದಿ 60 ವರ್ಷ (ಶೇ.60) ಮೇಲಿನವರು. 98 ಮಂದಿ ಪುರುಷರು ಹಾಗೂ 32 ಮಂದಿ ಮಹಿಳೆಯರು ಈವರೆಗೆ ಮೃತಪಟ್ಟವರಲ್ಲಿ ಸೇರಿದ್ದಾರೆ. ಉಡುಪಿಯ 73, ಕುಂದಾಪುರದ 35 ಹಾಗೂ ಕಾರ್ಕ ಳದ 21 ಮಂದಿ ಸೇರಿದ್ದಾರೆ.
ಜಿಲ್ಲೆಯಲ್ಲಿ ಇಂದಿನವರೆಗೆ ಕೋವಿಡ್ ಪಾಸಿಟಿವ್ ಆಗಿರುವ 14,036 ಮಂದಿಯಲ್ಲಿ 251 ಮಂದಿ ಹೊರ ಜಿಲ್ಲೆಗಳಿಂದ ಚಿಕಿತ್ಸೆಗೆಂದು ಉಡುಪಿ- ಮಣಿಪಾಲಗಳ ಆಸ್ಪತ್ರೆಗಳಿಗೆ ಬಂದವರು ಸೇರಿದವರಾಗಿದ್ದಾರೆ. 14,036 ಮಂದಿಯಲ್ಲಿ ಶೇ.6ರಷ್ಟು (844) ಮಂದಿ 10 ವರ್ಷ ಪ್ರಾಯದ ಮಕ್ಕಳಾದರೆ, ಶೇ.79ರಷ್ಟು (11,120) ಮಂದಿ 11ರಿಂದ 60 ವರ್ಷಗಳ ನಡುವಿನವರು. ಇನ್ನು 60 ವರ್ಷ ಮೇಲಿನ ಪ್ರಾಯದ ಶೇ.15ರಷ್ಟು (2,072) ಮಂದಿ ಪಾಸಿಟಿವ್‌ನಲ್ಲಿ ಸೇರಿದ್ದು, ಮೃತರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಇವರೇ ಆಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಕೊರೋನ ಪಾಸಿಟಿವ್ ಬಂದವರಲ್ಲಿ ಶೇ.37 ಮಂದಿಯಷ್ಟೇ (5,240) ರೋಗದ ಗುಣಲಕ್ಷಣವನ್ನು ಹೊಂದಿದ್ದಾರೆ. ಉಳಿದ ಶೇ.63ರಷ್ಟು (8796) ಮಂದಿಯಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಕೇವಲ ಪರೀಕ್ಷೆಯಿಂದ ಮಾತ್ರ ಇವರಿಗೆ ಸೋಂಕು ತಗಲಿರುವುದು ಪತ್ತೆಯಾಗುತ್ತಿದೆ. ಹೀಗಾಗಿ ಸಾಧ್ಯವಿದ್ದಷ್ಟು ಹೆಚ್ಚು ಮಂದಿ ಕೊರೋನ ಪರೀಕ್ಷೆ ಗೊಳಗಾಗುವುದರಿಂದ ಮಾತ್ರ ಸೋಂಕಿನ ವ್ಯಾಪಕತೆಯನ್ನು ನಿಯಂತ್ರಿಸಿ ಇದನ್ನು ಜಿಲ್ಲೆಯಲ್ಲಿ ನಿಯಂತ್ರಿಸಲು ಸಾಧ್ಯ, ಹಾಗೂ ಜನರ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ಜೀವವುಳಿಸಲು ಸಾಧ್ಯವಾಗುತ್ತದೆ.
ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ