ಬಿಬಿಎಂಪಿ: ವಾರ್ಡ್ ಗೊಬ್ಬರಂತೆ ನೋಡಲ್‍ ಅಧಿಕಾರಿ ನೇಮಿಸಲು ನಿರ್ಧಾರ

Update: 2020-09-14 13:07 GMT

ಬೆಂಗಳೂರು, ಸೆ.14: ಬಿಬಿಎಂಪಿ ವ್ಯಾಪ್ತಿಯಲ್ಲಿ 198 ಸದಸ್ಯರ ಅಧಿಕಾರ ಅವಧಿಯೂ ಮುಗಿದಿರುವುದರಿಂದ ವಾರ್ಡ್ ಗಳಲ್ಲಿ ಜನಸಾಮಾನ್ಯರ ಕುಂದುಕೊರತೆಗಳನ್ನು, ಮನವಿಗಳನ್ನು ಸ್ವೀಕರಿಸಲು ಸಮಸ್ಯೆಯಾಗಬಾರದೆಂದು ಬಿಬಿಎಂಪಿ ವಾರ್ಡ್ ಗೊಬ್ಬರಂತೆ ನೋಡಲ್ ಅಧಿಕಾರಿ ನೇಮಕ ಮಾಡಲು ನಿರ್ಧರಿಸಿದೆ.

ಇನ್ನು ಮುಂದೆ ವಾರ್ಡ್ ಕಮಿಟಿಗಳಲ್ಲಿ ಪಾಲಿಕೆ ಸದಸ್ಯರ ಬದಲು ಒಬ್ಬರು ನೋಡಲ್ ಅಧಿಕಾರಿ ಅಧ್ಯಕ್ಷರಾಗಲಿದ್ದಾರೆ. ಪ್ರತೀ ವಾರ್ಡ್ ಗೆ ಒಬ್ಬರಂತೆ ಹಿರಿಯ ಅಧಿಕಾರಿಗಳನ್ನು, ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ. ನೋಡಲ್ ಅಧಿಕಾರಿಗಳು ತಾವು ವಾಸವಿರುವ ವಾರ್ಡ್ ಗೆ ನೋಡಲ್ ಅಧಿಕಾರಿಗಳಾಗಿ ಕೆಲಸ ಮಾಡಲಿದ್ದಾರೆ. ವಸಂತನಗರ ವಾರ್ಡ್ ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಡಲ್ ಅಧಿಕಾರಿಯಾಗಲಿದ್ದಾರೆ. ಇದೇ ರೀತಿ ಎಲ್ಲಾ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ವಾರ್ಡ್ ಗಳ ಚೀಫ್‍ ಇಂಜಿನಿಯರ್ಸ್, ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ನೋಡಲ್ ಅಧಿಕಾರಿಯಾಗಿ ಗುರುತಿಸಿ, ಪಟ್ಟಿ ನೀಡುವಂತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಒಂದೇ ವಾರ್ಡ್ ನಲ್ಲಿ ಹೆಚ್ಚು ಸಂಖ್ಯೆಯ ಹಿರಿಯ ಅಧಿಕಾರಿಗಳು ವಾಸವಾಗಿದ್ದರೆ, ಹಿರಿತನದ ಮೇಲೆ ಆಯ್ಕೆ ಮಾಡಲು ತಿಳಿಸಲಾಗಿದೆ. ವಾರ್ಡ್ ಕಮಿಟಿಯಲ್ಲಿ ನೋಡಲ್ ಅಧಿಕಾರಿಗಳ ಜೊತೆಗೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವೂ ಇರಲಿದೆ.

ತಿಂಗಳಿಗೆ ಎರಡು ಬಾರಿ ಈ ವಾರ್ಡ್ ಕಮಿಟಿ ಸಭೆ ಸೇರಬೇಕು. ಮೊದಲ ಹಾಗೂ ಮೂರನೇ ಶನಿವಾರ ಸಭೆ ನಡೆಸಬೇಕು. ಜನರಿಗೆ ಸ್ಪಂದನೆ, ರಸ್ತೆ, ರಾಜಕಾಲುವೆ ನಿರ್ವಹಣೆ, ಪಾರ್ಕ್, ಗ್ರೌಂಡ್‍ ಆದಾಯ ಸಂಗ್ರಹದ ಬಗ್ಗೆ ಗಮನ ಕೊಡಲು ಕ್ರಮವಹಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News