ಕೊರೋನ ವಾರಿಯರ್ಸ್ ಗಳ ಮೇಲೆ ಹಲ್ಲೆ ಮಾಡುವವರ ದಂಡದ ಶುಲ್ಕ ಹೆಚ್ಚಳ: ಸಚಿವ ಶ್ರೀರಾಮುಲು

Update: 2020-09-25 13:37 GMT

ಬೆಂಗಳೂರು, ಸೆ.25: ಕೊರೋನ ವಾರಿಯರ್ಸ್, ವೈದ್ಯರು, ನರ್ಸ್ ಗಳ ಮೇಲೆ ಹಲ್ಲೆ ಮಾಡುವವರಿಗೆ ಹಾಗೂ ಹಲ್ಲೆಗೆ ಪ್ರೋತ್ಸಾಹಿಸುವವರಿಗೆ ವಿಧಿಸುತ್ತಿದ್ದ ದಂಡದ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಶುಕ್ರವಾರ ವಿಧಾನಪರಿಷತ್‍ನಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ-2020 ಮಂಡಿಸಿದ ಬಳಿಕ ಮಾತನಾಡಿದ ಅವರು, ಸರಕಾರಿ ಅಧಿಕಾರಿಗಳು, ವೈದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನರ್ಸ್ ಗಳು ಸೇರಿದಂತೆ ಅನೇಕರು ಕೊರೋನ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರುಗಳ ಮೇಲೆ ಅನಗತ್ಯವಾಗಿ ಹಲ್ಲೆ ಮಾಡುವ, ಪ್ರಚೋದಿಸುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಕೊರೋನ ವಾರಿಯರ್ಸ್ ಹಾಗೂ ವೈದ್ಯರು, ನರ್ಸ್ ಗಳ ಮೇಲೆ ಹಲ್ಲೆ ಮಾಡುವವರಿಗೆ ಮೊದಲ ಹಂತದಲ್ಲಿ 3 ತಿಂಗಳಿನಿಂದ 5 ವರ್ಷಗಳ ಕಾಲ ಜೈಲು ಹಾಗೂ 50 ಸಾವಿರದಿಂದ 1 ಲಕ್ಷದವರೆಗೆ ದಂಡ ಹಾಗೂ ಎರಡನೇ ಹಂತದಲ್ಲಿ 6 ತಿಂಗಳಿನಿಂದ 6 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷದಿಂದ 5 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಪ್ರಚೋದನೆ ಮಾಡುವವರಿಗೂ ಇದೇ ಶಿಕ್ಷೆ ಅನ್ವಯವಾಗಲಿದ್ದು, ಇವೆಲ್ಲವೂ ಜಾಮೀನು ರಹಿತ ಶಿಕ್ಷೆಗಳಾಗಿರುತ್ತವೆ ಎಂದು ಅವರು ಮಾಹಿತಿ ನೀಡಿದರು.

ಮುಷ್ಕರ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕ ಹಾಗೂ ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಹಾನಿಗೊಳಪಡಿಸಿದವರಿಂದಲೇ ಸಂಪೂರ್ಣ ವಸೂಲಿ ಮಾಡುವ ಕುರಿತು ವಿಧೇಯಕದಲ್ಲಿ ಅಳವಡಿಸಲಾಗಿದೆ ಎಂದು ಶ್ರೀರಾಮುಲು ವಿವರಿಸಿದರು.

1 ಕೋಟಿ ಪರಿಹಾರ ನೀಡಿ: ಕೊರೋನ ವಾರಿಯರ್ಸ್ ಗೆ ಪ್ರಸ್ತುತ 30 ಲಕ್ಷ ಮಾತ್ರ ಪರಿಹಾರ ಮೀಸಲಿಟ್ಟಿದೆ. ಆದರೆ, ಅದನ್ನು ಒಂದು ಕೋಟಿಗೆ ಹೆಚ್ಚಳ ಮಾಡಬೇಕು ಎಂದು ಯು.ಬಿ.ವೆಂಕಟೇಶ್ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ತಿಪ್ಪೇಸ್ವಾಮಿ ಕೇಂದ್ರದಿಂದ 50 ಲಕ್ಷ ಪರಿಹಾರ ನೀಡಲಾಗುತ್ತಿದೆ. ಅದನ್ನು ರಾಜ್ಯ ಸರಕಾರ ಹೆಚ್ಚಿಸಲಿ ಹಾಗೂ ಎನ್‍ಜಿಒಗಳನ್ನು ಈ ಕಾಯ್ದೆಯಡಿ ತನ್ನಿ ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News