ಎಲ್ಲ ರೀತಿಯಿಂದ ದೊಡ್ಡವರು ಜಿ. ಎಸ್. ಆಮೂರ

Update: 2020-09-28 17:52 GMT
ಎಲ್ಲ ರೀತಿಯಿಂದ ದೊಡ್ಡವರು ಜಿ. ಎಸ್. ಆಮೂರ
  • whatsapp icon

ಜಿ. ಎಸ್. ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ ಅವರು 95 ದಾಟ್ಟಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ, ಬಾಂಧವ್ಯ ಈ ಪದಗಳಿಗಿಂತ ಉತ್ತಮ) ದೊಡ್ಡದು. ಮೇಷ್ಟ್ರುಗಳಷ್ಟೇ ಅಲ್ಲ ಬೇರೆ ಬೇರೆ ನೌಕರಿಗಳಲ್ಲಿದ್ದವರೂ ಇದ್ದರು. ಇರಲಿ. ನವೋದಯ, ನವೋದಯಪೂರ್ವ ಕಾಲದಿಂದಲೂ ಈ ಇತಿಹಾಸವಿದೆ. ಆ ಪರಂಪರೆಯ ಕೊಂಡಿಯಾಗಿದ್ದ ಆಮೂರ ಕಳಚಿಕೊಂಡು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾದರು.

ಕನ್ನಡಕ್ಕೆ ಗಂಟುಬೀಳುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕೂ ಇದೆ! ಅವರಲ್ಲಿ ಬಹುತೇಕರಿಗೆ ಅತ್ತ ಇಂಗ್ಲಿಷೂ ಐಬು, ಇತ್ತ ಅವರ ತಾಯ್ನುಡಿಯೂ ಐಬು. ಅವರು ಇಂಗ್ಲಿಷ್ ಡಿಗ್ರಿ ಸರ್ಟಿಫಿಕೇಟ್ ಇಟ್ಟುಕೊಂಡು ಕನ್ನಡದೊಳಗೆ ಓಡಾಡುತ್ತಾ ಇರುತ್ತಾರೆ. ಸ್ವಲ್ಪಬೆದರಿಕೆ, ಸ್ವಲ್ಪಬೂಟಾಟಿಕೆ ತೋರುತ್ತಾರೆ! ಕೆಲವು ಕನ್ನಡದವು ಬೆದರೋದೂ ಉಂಟು!

ಆದರೆ ಕನ್ನಡಕ್ಕೆ ಕಾಮಧೇನುವಿನಂತೆ ಬರುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ ಇದೆಯಲ್ಲಾ ಅದು ಮಹತ್ವದ್ದು. ‘ಶ್ರೀ’ ಯವರಿಂದಲೇ ಶ್ರೀಕಾರಗೊಂಡ ಆ ಪರಂಪರೆಗೆ ಸೇರಿದವರು ಆಮೂರ. ಮುಂದುವರಿದ ಹೊಸ ತಲೆಮಾರಿನಲ್ಲೂ ಕೆಲವರು ಆ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಇಂಥವರು ಕನ್ನಡವನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ. ಕನ್ನಡವೆಂಬುದು ಇಂಗ್ಲಿಷಿನಂತೆಯೇ ಒಂದು ದೊಡ್ಡ ಭಾಷೆಯೆಂಬ ಅರಿವಿನಲ್ಲಿ ಒಡನಾಡುತ್ತಾರೆ, ಕೆಲಸ ಮಾಡುತ್ತಾರೆ. ಅಂತಹವರಿಂದಲೇ ಇವಳ ಒಡವೆ ಅವಳಿಗಿಡುವ ಶಕ್ತಿ ಬರುವುದು. ಆಮೂರ ಇಂಗ್ಲಿಷ್ ಮತ್ತು ಕನ್ನಡ ಎರಡನ್ನೂ ಅರಗಿಸಿಕೊಂಡ ವಿಮರ್ಶಕರು. ಯಾವ ವಿಷಯವೇ ಆಗಲಿ ಅವರು ಬುಡಮಟ್ಟ ಶೋಧಿಸಿ ಬರೆಯುತ್ತಿದ್ದರು. ಕನ್ನಡ ಕಥನ ಪರಂಪರೆ, ಮಹಿಳೆಯರ ಕಾವ್ಯ, ನವೋದಯ ಸಾಹಿತ್ಯ, ಜನಪ್ರಿಯ ಸಾಹಿತ್ಯ ಎಲ್ಲದರ ಬಗ್ಗೆಯೂ ಸಮಾನ ಆಸಕ್ತಿಯಿಂದ ಅಧ್ಯಯನಶೀಲರಾಗುತ್ತಿದ್ದರು. ಬೇಂದ್ರೆ, ಶ್ರೀರಂಗರ ಬಗ್ಗೆ ಎಂಥ ತಾದಾತ್ಮ್ಯ ಹೊಂದುತ್ತಿದ್ದರೋ ಅಷ್ಟೇ ತಾದಾತ್ಮ್ಯದಲ್ಲಿ ಜನಪ್ರಿಯ ಕಾದಂಬರಿಕಾರ ಅನಕೃ ಬಗ್ಗೆ ಚಿಂತಿಸಿ ಬರೆಯುತ್ತಿದ್ದರು. ಜನಪ್ರಿಯ ಸಾಹಿತ್ಯದ ಬಗ್ಗೆ ಸದಭಿರುಚಿಯ ಅಭಿಪ್ರಾಯ ಮೂಡಿಸುತ್ತಿದ್ದರು.

ಇಂಗ್ಲಿಷ್ ಭಾಷೆಯಲ್ಲಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಮಳಗಾಂವಕರ್, ಮುಲ್ಕ್ ರಾಜ್ ಆನಂದ, ರಾಜಾರಾವ್, ನಾಯ್ಪ್‌ಲ್, ಸಲ್ಮಾನ್ ರುಶ್ದಿ (ನಾನು ನೈಪಾಲ್, ರಶ್ದಿ ಅಂದಾಗಲೆಲ್ಲ ಅವರು ನಾಯ್ಪಿಲ್, ರುಶ್ದಿ ಅಂತ ಸರಿಮಾಡುತ್ತಿದ್ದರು!) ಅವರೆಲ್ಲರ ಕೃತಿಗಳ ವಿಸ್ತೃತ ಓದು ಅವರದಾಗಿತ್ತು. ಕುವೆಂಪು ಅವರ ರಾಮಾಯಣ ದರ್ಶನಂ ಕುರಿತ ಅವರ ಇಂಗ್ಲಿಷ್ ಲೇಖನ ಬಹಳ ಮೌಲಿಕವಾದುದು.

ಪ್ರಾಚೀನ ಸಾಹಿತ್ಯದ ಬಗ್ಗೆ ಇರುವಷ್ಟೇ ಆಸಕ್ತಿಯನ್ನು ಹೊಸದಾಗಿ ಬರೆಯುವವರ ಕತೆ ಕವಿತೆಗಳನ್ನು ಸಂಕಲನಗಳಲ್ಲಿ ಸೇರಿಸುತ್ತಿದ್ದರು. ಬೇರೆ ಬೇರೆ ರೀತಿಯ ಸಂಕಲನಗಳನ್ನು ಸಂಪಾದಿಸುವುದಕ್ಕೆ ಬೇಕಾದ ಅಪಾರ ಓದನ್ನು ಅವರು ಸಂತೋಷದಿಂದ ಮತ್ತು ಪರಿಪೂರ್ಣತೆಯಿಂದ ಮಾಡುತ್ತಿದ್ದರು.
ಬೆಂಗಳೂರಿಗೆ ಬಂದರೆ ಲಂಕೇಶ್ ಅವರಲ್ಲಿಗೆ ಭೇಟಿ ಕೊಟ್ಟು ಅವರೊಡನೆ ಗಂಭೀರ ಸಾಹಿತ್ಯ ಚರ್ಚೆ ಮಾಡುತ್ತಿದ್ದರು. ಹಾಗೆ ಒಮ್ಮೆ ಚರ್ಚಿಸುತ್ತಿದ್ದ ಹೊತ್ತಿನಲ್ಲಿ ಅವರು, ‘‘ವರ್ಷಕ್ಕೆ ಒಂದು ಸಾರಿ ತಪ್ಪದೇ War and Peace ಮತ್ತು Anna Karenina ಓದೇ ಓದ್ತೀನಿ’’ ಅಂತ ಹೇಳಿದ್ದು ನನ್ನ ನೆನಪಿನಲ್ಲಿದೆ. ಅವರ ‘ಭುವನದ ಭಾಗ್ಯ’ ಕುರಿತು ಆಗ ನಾನು ಲಂಕೇಶ್ ಪತ್ರಿಕೆಯಲ್ಲಿ ಬರೆದಿದ್ದೆ.

ಅವರು ಬಹುಶೃತ ವಿದ್ವಾಂಸರಾಗಿದ್ದರು. ನಿಷ್ಠುರ ವಿಮರ್ಶಕರಾಗಿದ್ದರು. ಒಮ್ಮೆ ಒಂದು ಪ್ರತಿಷ್ಠಿತ ಪ್ರಶಸ್ತಿ ತೀರ್ಮಾನ ಮಾಡಲು ಒಂದು ಸಭೆ ನಡೆಯಿತು. ಮೂವರು ತೀರ್ಪುಗಾರರಲ್ಲಿ ಆಮೂರ ಒಬ್ಬರು. ಇನ್ನೊಬ್ಬರು ಅವರ ವಯಸ್ಸಿನವರೇ. ಮೂರನೆಯವರು ಇನ್ನೂ ಯುವಕರು. ತೀರ್ಮಾನ ವಿವಾದದಲ್ಲಿ ಆಯಿತು. ಆ ಪ್ರಶಸ್ತಿಗೆ ಯಾವ ರೀತಿಯಿಂದಲೂ ಅರ್ಹವಲ್ಲದ ಕೃತಿಯನ್ನು ಆಮೂರ ಒಪ್ಪಲಿಲ್ಲ. ಆದರೆ ಉಳಿದಿಬ್ಬರ ಬಹುಮತವಿತ್ತು. ಅದು ಆಯ್ಕೆಯಾಗಬೇಕಾಯಿತು. ಎಲ್ಲ ಮುಗಿದಮೇಲೆ ಹೊರಡುವಾಗ ಆ ಯುವಕರನ್ನು ಪಕ್ಕಕ್ಕೆ ಕರೆದು ಆಮೂರ ಹೇಳಿದರು, ‘‘ನೀವಿನ್ನೂ ಚಿಕ್ಕ ವಯಸ್ಸಿನವರಿದ್ದೀರಿ, ಇನ್ನು ಮುಂದೆ ಎಂದೂ ಇಂಥ ಲಿಟರರಿ ಪೊಲಿಟಿಕ್ಸ್ ಮಾಡಬೇಡಿ’’ ಅಂದ ಅವರ ಮಾತಿಗೆ ನಾನು ಸಾಕ್ಷಿಯಾಗಿದ್ದೆ. ಆ ಯುವ ಪ್ರಭೃತಿ ತಲೆತಗ್ಗಿಸಿ ನಿಂತಿದ್ದರು.

ಅದು ಸಾಹಿತ್ಯ ಲೋಕದಲ್ಲಿರಬೇಕಾದ ದೊಡ್ಡತನ. ಆಮೂರ ಅಂಥ ಅಪರೂಪದ ದೊಡ್ಡವರು. ನಮಗೆ ಬಹಳಷ್ಟು ಕಲಿಸಿದ್ದಾರೆ. ಅಂಥ ಮೌಲ್ಯಗಳನ್ನು ಕಲಿತು ದೊಡ್ಡವರಾಗಲು ಬದುಕೋಣ.
ಅವರ ನೆನಪಿಗೆ ನಮನಗಳು.

Writer - ಅಗ್ರಹಾರ ಕೃಷ್ಣಮೂರ್ತಿ

contributor

Editor - ಅಗ್ರಹಾರ ಕೃಷ್ಣಮೂರ್ತಿ

contributor

Similar News