ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್ ಪ್ರಯೋಗಾಲಯ ಸ್ಥಾಪನೆ: ಸಚಿವ ಡಾ.ಕೆ.ಸುಧಾಕರ್

Update: 2020-10-02 12:15 GMT

ಬೆಂಗಳೂರು, ಅ.2: ಖಾಸಗಿ ಸಹಭಾಗಿತ್ವದಲ್ಲಿ ಕೋವಿಡ್ ಪ್ರಯೋಗಾಲಯಗಳ ಸ್ಥಾಪನೆಗೆ ಸರಕಾರ ನಿರ್ಧರಿಸಿದ್ದು, ವಾರದಲ್ಲಿ ಈ ಸಂಬಂಧ ಟೆಂಡರ್ ಕರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಯೂರೋಫಿನ್ಸ್ ಕ್ಲಿನಿಕಲ್ ಜೆನೆಟಿಕ್ ಇಂಡಿಯಾ ಸಂಸ್ಥೆ ವೈಟ್‍ಫೀಲ್ಡ್ ನಲ್ಲಿ ಸ್ಥಾಪಿಸಿರುವ ನೂತನ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಸೂಚನೆ ಮೇರೆಗೆ ಕೊರೋನ ಸೋಂಕಿತರ ಪರೀಕ್ಷೆಯನ್ನು ಮೂರು ಪಟ್ಟು ಹೆಚ್ಚಿಸಲು ನಿರ್ಧರಿಸಿ ಅಗತ್ಯ ಮೂಲ ಸೌಲಭ್ಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಿದ್ದು ವಾರದೊಳಗೆ ಟೆಂಡರ್ ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

ಕೇವಲ ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 144 ಕೋವಿಡ್ ಪರೀಕ್ಷಾ ಲ್ಯಾಬ್‍ಗಳನ್ನು ಆರಂಭಿಸಲಾಗಿದೆ. ಈಗ ಉದ್ಘಾಟನೆಗೊಂಡ ಯುರೋಫಿನ್ಸ್ ಲ್ಯಾಬ್ 145ನೆಯದು. ಇಲ್ಲಿ ದಿನಕ್ಕೆ 5 ಸಾವಿರ ಟೆಸ್ಟ್ ಭರವಸೆಯನ್ನು ಕಂಪನಿ ನೀಡಿದೆ. ಸರಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಸುಧಾಕರ್ ಭರವಸೆ ನೀಡಿದರು.

ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕಾಗಿ ಸಾಕಷ್ಟು ಅರಿವು ಮೂಡಿಸಿದರೂ ಜನರು ಜಾಗೃತರಾಗದ ಕಾರಣ ಸೋಂಕು ಪ್ರಕರಣ ಹೆಚ್ಚುತ್ತಿವೆ. ಹೀಗಾಗಿ ಮಾಸ್ಕ್ ಧರಿಸದ, ಸರಕಾರದ ಮಾರ್ಗಸೂಚಿ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು ದಂಡದ ಪ್ರಮಾಣ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಪಾಸಿಟಿವ್ ಪ್ರಕರಣಗಳು ಹೆಚ್ಚಿದ್ದರೂ ಸಾವಿನ ಪ್ರಮಾಣದಲ್ಲಿ ಶೇ.1.52 ರಷ್ಟಿದ್ದು ನಿಯಂತ್ರಣ ಸಾಧಿಸಿದ್ದೇವೆ. ಅಲ್ಲದೇ, 50 ಲಕ್ಷ ಕೋವಿಡ್ ಪರೀಕ್ಷೆ ನಡೆಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ದಿನಕ್ಕೆ 1.5 ಲಕ್ಷ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದ್ದೇವೆ ಎಂದು ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News