ಕನಿಷ್ಠ ಬೆಂಬಲ ಬೆಲೆ ಹಿಂತೆಗೆತ ಎಂಬುವುದು ಸುಳ್ಳು ಸುದ್ದಿ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Update: 2020-10-02 11:55 GMT

ಬೆಂಗಳೂರು, ಅ. 2: ಕೇಂದ್ರವು ಅಂಗೀಕರಿಸಿದ ಹೊಸ ಕಾಯ್ದೆಗಳು ರೈತರನ್ನು ಎಲ್ಲ ಬಂಧನದಿಂದ ಮುಕ್ತಗೊಳಿಸಿದ್ದು, ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಕಾಸಸೌಧದ ಸಮ್ಮೆಳನ ಸಭಾಂಗಣದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತಿತ್ತರ ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದು, ಮಸೂದೆಗಳಲ್ಲಿ ಟೀಕಿಸಲು ವಿಪಕ್ಷ ನಾಯಕರಿಗೆ ಯಾವುದೂ ಋಣಾತ್ಮಕ ಅಂಶಗಳು ಸಿಗುತ್ತಿಲ್ಲ. ಹೀಗಾಗಿ ಕಾಯಿದೆಗಳ ವಿಚಾರವಾಗಿ ಅಪಪ್ರಚಾರ ಮಾಡುತ್ತಿದ್ದು, ದಲ್ಲಾಳಿಗಳಿಗಾಗಿ ವಿಪಕ್ಷಗಳು ಧ್ವನಿಯೆತ್ತುವ ಮೂಲಕ ಸರಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿದರು.

ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಿಂತೆಗೆದುಕೊಳ್ಳಲಾಗುತ್ತದೆ ಎಂಬುದು ಮಸೂದೆ ವಿರೋಧಿಗಳು ರೈತ ಸಮುದಾಯದಲ್ಲಿ ಹರಡುತ್ತಿರುವ ಪ್ರಮುಖ ಸುಳ್ಳು. ಕನಿಷ್ಠ ಬೆಂಬಲ ವ್ಯವಸ್ಥೆಯನ್ನು ಮುಂದುವರಿಸುವುದರ ಜೊತೆಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಕ್ರಮ ಕೈಗೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಸುವ ಬಗ್ಗೆ ಸಂಸತ್ತಿನಲ್ಲೂ ಹಾಗೂ ಹೊರಗೆ ಖುದ್ದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಈಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ರದ್ದಾಗುತ್ತವೆ ಎಂಬುದು ರೈತರನ್ನು ದಾರಿತಪ್ಪಿಸಲು ಮಸೂದೆ ವಿರೋಧಿಗಳು ಹೇಳುತ್ತಿರುವುದು ಮತ್ತೊಂದು ಸುಳ್ಳು. 2012ರ ಡಿಸೆಂಬರ್ 4ರಂದು ಯುಪಿಎ ಸರಕಾರದ ಪರವಾಗಿ ಸಚಿವ ಕಪಿಲ್ ಸಿಬಲ್ ಲೋಕಸಭೆಯಲ್ಲಿ ಏನು ಮಾತನಾಡಿದರು ಎಂಬುದು ಸದನದ ಕಡತದಲ್ಲಿದೆ. ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಆದುದರಿಂದ ಸುಳ್ಳು ಪ್ರಚಾರದಲ್ಲಿ ತೊಡಗಿವೆ. ಆದರೆ, ಯಾವುದೇ ಕಾರಣಕ್ಕೂ ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರಕ್ಕೆ ರೈತರು ಬಲಿಯಾಗುವುದಿಲ್ಲ ಎಂದು ಕೇಂದ್ರ ಸಚಿವರು ಭರವಸೆ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, 2007ರ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಶೇ.104ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಹೆಚ್ಚಾದ ಕಾರಣ ರಸಗೊಬ್ಬರ ಯೂರಿಯಾಕ್ಕೂ ಬೇಡಿಕೆ ಹೆಚ್ಚಾಗಿತ್ತು. ರಾಜ್ಯದ ಬೇಡಿಕೆಯನ್ನು ಕೇಂದ್ರ ಸರಕಾರ ಹಂತ ಹಂತವಾಗಿ ಈಡೇರಿಸಿದ್ದು, ಎಲ್ಲಿಯೂ ರಸಗೊಬ್ಬರ ಅಥವಾ ಬಿತ್ತನೆ ಬೀಜಕ್ಕಾಗಲೀ ಕೊರತೆಯುಂಟಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವೆಡೆ ಅಪಪ್ರಚಾರ ಮಾಡಲಾಗಿತ್ತು. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ರಸಗೊಬ್ಬರ ಯೂರಿಯಾಕ್ಕೆ ಕೊರತೆಯಾಗುವಂತೆ ಮಾಡಿದ 148 ಅಂಗಡಿಗಳ ಪರವಾನಿಗೆ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 190 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ 118 ಲಕ್ಷ ಹೆ.ಕೃಷಿಗೆ ಯೋಗ್ಯ ಭೂಮಿಯಿದ್ದು, 7.69 ಲಕ್ಷ ಹೆ. ಬಂಜರು ಭೂಮಿ ಹಾಗೂ 4.03 ಲಕ್ಷ ಹೆ.ಕೃಷಿ ಮಾಡಬಹುದಾದ ತ್ಯಾಜ್ಯ ಭೂಮಿಯಿದೆ. ಬೀಳು ಭೂಮಿ 15.35 ಲಕ್ಷ ಹೆಕ್ಟೇರ್ ಪ್ರದೇಶವಿದೆ. ಕೃಷಿ ಮತ್ತು ಕೈಗಾರಿಕೆಗಳು ಎರಡು ಸಮಾನವಾಗಿ ಅಭಿವೃದ್ಧಿ ಹೊಂದಿರುವ ಅವಕಾಶವಿದೆ. ಜೊತೆಗೆ ಕೃಷಿಯನ್ನು ಉದ್ದಿಮೆ ಸ್ವರೂಪದಲ್ಲಿ ಬೆಳೆಸುವ ಅವಕಾಶ ಕೃಷಿ ತಿದ್ದುಪಡಿ ಕಾಯಿದೆಯಿಂದ ಸಾಧ್ಯವಾಗಿದೆ.

ಬಂಜರು, ಬೀಳು ಭೂಮಿಯಲ್ಲಿಯೂ ಕೃಷಿ ಪದವೀಧರರು ಕೃಷಿ ಮಾಡಲು ಭೂ ಸುಧಾರಣೆ ಕಾಯಿದೆ ತಿದ್ದುಪಡಿಯಿಂದ ಅವಕಾಶ ಕಲ್ಪಿಸಲಾಗಿದೆ. ಪ್ರತಿವರ್ಷ ಸುಮಾರು 4 ಸಾವಿರ ಕೃಷಿ ಪದವೀಧರರು ಕೃಷಿ ವಿಶ್ವವಿದ್ಯಾಲಯದಿಂದ ಹೊರ ಬರುವುದರಿಂದ ಅವರಿಗೆ ಅಧಿಕ ಅವಕಾಶಗಳು ಇದರಿಂದ ದೊರೆತಂತಾಗುತ್ತದೆ. 10 ಸಾವಿರ ಕೋಟಿ ರೂ.ಗಳನ್ನು ಪ್ರಧಾನಿ ಮೋದಿ ಆತ್ಮನಿರ್ಭರ್ ಯೋಜನೆಯಡಿ ಕೃಷಿ ಆಹಾರ ಉತ್ಪಾದನೆಗೆ ಮೀಸಲಿಟ್ಟಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಭೂ ಸುಧಾರಣೆ ಕಾಯಿದೆ ತಿದ್ದುಪಡಿಯಾಗಿದೆ. ಒಂದು ರಾಷ್ಟ್ರ ಮಾರುಕಟ್ಟೆ ನೀತಿ ದೇಶದಲ್ಲಿ ಜಾರಿಗೆ ಬಂದಿದೆ ಎಂದರು.

ಬದಲಾವಣೆ ತಂದಾಗ ವಿರೋಧಿಸುವುದು ಸಹಜ. ಎಪಿಎಂಸಿ, ಭೂ ಸುಧಾರಣೆ ಕಾಯಿದೆ ತಿದ್ದುಪಡಿಗೆ ಕಾಂಗ್ರೆಸ್ ಪಕ್ಷವೇ ಹಿಂದೆ ಹೇಳಿತ್ತು. ಆದರೀಗ ತನ್ನಿಂದ ಮಾಡಲಾಗದ್ದನ್ನು ಪ್ರಧಾನಿ ಮೋದಿ ಮಾಡಿ ತೋರಿಸಿದ್ದಕ್ಕೆ ಕಾಂಗ್ರೆಸ್ ರಾಜಕೀಯ ಕಾರಣಗಳಿಗಾಗಿ ದಲ್ಲಾಳಿಗಳ ಪರವಾಗಿ ವಿರೋಧಿಸುತ್ತಿದೆ. ಕಾಂಗ್ರೆಸ್‍ನ ಈ ನಡೆ ಹಾಸ್ಯಾಸ್ಪದ. ದಲ್ಲಾಳಿಗಳ ಅನುಕೂಲಕ್ಕಾಗಿ ಕಾಂಗ್ರೆಸ್ ವಿರೋಧಿಸುತ್ತಿದೆಯೇ ಹೊರತು ರೈತರಿಗಾಗಿ ಅಲ್ಲ. ಸಾರ್ವಜನಿಕರಿಂದಲೂ ಹಾಗೂ ರೈತರಿಂದಲೂ ಕೃಷಿ ಕಾಯಿದೆ ತಿದ್ದುಪಡಿಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ರಾಜ್ಯದಲ್ಲಿ ಆ್ಯಪ್ ಮೂಲಕ ನಡೆಸಿದ ಬೆಳೆ ಸಮೀಕ್ಷೆ ಯಶಸ್ವಿಯಾಗಿದ್ದು, ಇಂದಿನ ವರೆಗೆ ಶೇ.90ರಷ್ಟು ಪ್ಲಾಟ್‍ಗಳ ರೈತರು ಬೆಳೆ ಸಮೀಕ್ಷೆಯಲ್ಲಿ ಅಪ್‍ಲೋಡ್ ಆಗಿದ್ದು, ಕೇಂದ್ರ ಸರಕಾರ ಈ ಯೋಜನೆಯನ್ನು ಇತರೆ ರಾಜ್ಯಗಳಲ್ಲಿಯೂ ವಿಸ್ತರಿಸುತ್ತಿದೆ ಎಂದು ಬಿ.ಸಿ.ಪಾಟೀಲ್ ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ಧಿಗೊಷ್ಟಿಯಲ್ಲಿ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News