ಉಪ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ರಾಜಕೀಯ ಪಕ್ಷಗಳ ಕಸರತ್ತು

Update: 2020-10-02 11:59 GMT

ಬೆಂಗಳೂರು, ಅ. 2: ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್.ಆರ್.ನಗರ)ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಕಸರತ್ತು ನಡೆಸಿದ್ದು, ಮೂರು ರಾಜಕೀಯ ಪಕ್ಷಗಳು `ಕಾದುನೋಡುವ ತಂತ್ರ'ಕ್ಕೆ ಶರಣಾಗಿವೆ.

ಮುನಿರತ್ನ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಮುನಿರತ್ನ ಅವರಿಗೆ ಟಿಕೆಟ್ ಕೊಡಿಸಲು ಸಿಎಂ ಬಿಎಸ್‍ವೈ ಹರಸಾಹಸ ಪಡುತ್ತಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷದ ಯುವ ಮುಖಂಡ ತುಳಸಿ ಮುನಿರಾಜುಗೌಡ ಅವರಿಗೆ ಟಿಕೆಟ್ ಕೊಡಿಸಲು ವರಿಷ್ಠರ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿರುವುದು ಇದೀಗ ಬಹಿರಂಗವಾಗಿದೆ.

ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದರೆ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯನ್ನು ನಿಲ್ಲಿಸಲು ವಿಪಕ್ಷ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ರಣತಂತ್ರ ಹೆಣೆಯುತ್ತಿದ್ದಾರೆ. ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ನಡೆದಿದ್ದು, ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

ಒಂದೆರಡು ದಿನಗಳಲ್ಲಿ ಅಂತಿಮ: ರಾಜರಾಜೇಶ್ವರಿ ನಗರ ಕ್ಷೇತ್ರ ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳು ಯಾರು ಎನ್ನುವ ಕುತೂಹಲಕ್ಕೆ ಇನ್ನೆರಡು ದಿನದಲ್ಲಿ ತೆರೆ ಬೀಳಲಿದೆ. ಈಗಾಗಲೇ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಇಂದಿಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.

ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಅಭ್ಯರ್ಥಿಗಳ ಹೆಸರು ಪ್ರಕಟಣೆ ಮಾತ್ರ ಬಾಕಿ ಇದೆ. ಉಳಿದಂತೆ ಚುನಾವಣಾ ಸಿದ್ದತೆ ಆರಂಭಿಸಲಾಗಿದೆ. ಅಭ್ಯರ್ಥಿಗಳ ಹೆಸರುಗಳುಳ್ಳ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುವ ಜವಾಬ್ದಾರಿ ನಿರ್ವಹಿದ್ದೇವೆ. ಆದರೆ, ನಾವು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಚುನಾವಣಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ವಾರದೊಳಗೆ ಅಂತಿಮ: ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಪಕ್ಷದ ಮುಖಂಡರೊಂದಿಗೆ ಈಗಾಗಲೇ ಹಲವು ಸುತ್ತಿನ ಸಮಾಲೋಚನೆ ನಡೆಸಿದ್ದು, ಇನ್ನೂ ಒಂದು ವಾರದೊಳಗೆ ಜೆಡಿಎಸ್ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.

ಶಿರಾ ಕ್ಷೇತ್ರದಲ್ಲಿ ಬಿ.ಸತ್ಯನಾರಾಯಣ ಕುಟುಂಬದವರು ಸೇರಿದಂತೆ ಇನ್ನೂ ಹಲವು ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆದರೂ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸರಿಸಮಾನಾಗಿ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಆಕಾಂಕ್ಷಿಗಳು ಹೆಚ್ಚಿರುವುದರಿಂದ ಆಯ್ಕೆ ವಿಳಂಬವಾಗುತ್ತಿದೆ. ಶೀಘ್ರವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪಕ್ಷಗಳ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News