ಹತ್ರಸ್‍ನಲ್ಲಿ ಯುವತಿಯ ಅತ್ಯಾಚಾರ ಖಂಡಿಸಿ ಬೆಂಗಳೂರಿನಲ್ಲಿ ದಲಿತ ಸಂಘಟನೆಗಳಿಂದ ಪ್ರತಿಭಟನೆ

Update: 2020-10-05 14:34 GMT

ಬೆಂಗಳೂರು, ಅ.5: ಉತ್ತರ ಪ್ರದೇಶದ ಹತ್ರಸ್‍ನಲ್ಲಿ ಯುವತಿಯ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ನಗರದ ಮೌರ್ಯ ವೃತ್ತದ ಬಳಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅಮಾನುಷವಾಗಿ ಅತ್ಯಾಚಾರ ಹಾಗೂ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದರು.

ಮಹಿಳೆಯರು, ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಪ್ರಾಣ, ಮಾನವನ್ನು ರಕ್ಷಿಸಲು ಉತ್ತರ ಪ್ರದೇಶ ಸರಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ, ಕೂಡಲೇ ಈ ಸರಕಾರವನ್ನು ವಜಾಗೊಳಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿಎಸ್‍ಎಸ್(ಅಂಬೇಡ್ಕರ್ ವಾದ) ಸಂಚಾಲಕ ಮಾವಳ್ಳಿ ಶಂಕರ್, ಉತ್ತರ ಪ್ರದೇಶದಲ್ಲಿ ದುಷ್ಕೃತ್ಯ ಎಸಗುವವರ ಹಿತ ಕಾಪಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರಿಂದ ಹೆಚ್ಚು ಉತ್ತೇಜನಗೊಂಡ ಅಲ್ಲಿನ ಕಾಮುಕರು, ಜಾತ್ಯಾಂಧರಿಗೆ ಅಂತಹ ಕ್ರೌರ್ಯವನ್ನು ನಡೆಸಲು ಮತ್ತಷ್ಟು ಬಲಬಂದಂತಾಗಿದೆ. ಇದು ಖಂಡಿತವಾಗಿಯೂ ಆ ರಾಜ್ಯದ ಅರಾಜಕತೆಯನ್ನು ನಿರೂಪಿಸುತ್ತದೆ. ಪೊಲೀಸರ ಅಂತಃಕರಣ ಶೂನ್ಯ ಅಟ್ಟಹಾಸಕ್ಕೆ ಅಲ್ಲಿನ ಸರಕಾರ ಕುಮ್ಮಕ್ಕು ನೀಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆದಿರುವ ಅಮಾನವೀಯ ಕೃತ್ಯದ ಹೊಣೆಯನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೊರಬೇಕು. ಇದು ಅತ್ಯಾಚಾರದ ಸಂಬಂಧವಾಗಿ ಲಭ್ಯವಾಗಬಹುದಾದ ಸಾಕ್ಷ್ಯಗಳನ್ನು ನಾಶಪಡಿಸಿ ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದ ಕಾರ್ಯಾಚರಣೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅಲ್ಲದೆ, ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಪೊಲೀಸರು ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಹೇಳಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಪಾದಿಸಿದರು.

ದಲಿತ ಮುಖಂಡ ಲಕ್ಷ್ಮಿನಾರಾಯಣ ನಾಗವಾರ್ ಮಾತನಾಡಿ, ಅತ್ಯಾಚಾರ ಪ್ರಕರಣವನ್ನು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆಯಾಗಬೇಕು. ಉತ್ತರ ಪ್ರದೇಶದ ಸರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಪ್ರವೇಶ ಮಾಡಬಾರದು. ಇನ್ನು ಈ ಪ್ರಕರಣದ ಕುರಿತು ಪ್ರಶ್ನಿಸುವವರನ್ನು ಕೊಲೆ ಮಾಡುವ ಬೆದರಿಕೆ ಹಾಕುತ್ತಿರುವುದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಜೀವನಹಳ್ಳಿ ಆರ್.ವೆಂಕಟೇಶ್, ಕ್ಯಾಸಂಬಳ್ಳಿ ಶ್ರೀನಿವಾಸ್, ಉಮಾಶಂಕರ್, ವಿ.ನಾಗರಾಜ, ರಾಧಮ್ಮ, ರಮೇಶ್, ವೆಂಕಟೇಶ್ ಸೇರಿದಂತೆ ದಲಿತ ಸಂಘರ್ಷ ಸಮಿತಿ, ದಲಿತ ಸೇನೆ, ದಲಿತ ಯುವಮೋರ್ಚಾ ಸಂಘಟನೆಗಳ ಜಿಲ್ಲಾ ಹಾಗೂ ರಾಜ್ಯಮಟ್ಟದ ನಾಯಕರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News