ಬೆಂಗಳೂರು ನಗರದಾದ್ಯಂತ ಸಾಂಸ್ಕೃತಿಕ ವೈಭವಕ್ಕೆ ಸಿದ್ಧತೆ ಆರಂಭ

Update: 2020-10-10 16:52 GMT

ಬೆಂಗಳೂರು, ಅ.10: ದಸರಾ ಹಬ್ಬದ ಅಂಗವಾಗಿ ನಗರದಾದ್ಯಂತ ಮಕ್ಕಳು, ವಯಸ್ಕರು, ಹಿರಿಯರು ಎಲ್ಲರೂ ಸೆಳೆಯುವಂತಹ ನವರಾತ್ರಿ ಗೊಂಬೆಗಳು ಎಲ್ಲೆಡೆ ರಾರಾಜಿಸುತ್ತಿವೆ.

ಬಕಾಸುರನ ವಧೆಗೆ ಭೀಮನು ಬಂಡಿಯಲ್ಲಿ ಊಟ ಕೊಂಡೊಯ್ಯುತ್ತಿರುವುದು, ಕರ್ಣನ ಜನನ ಸೇರಿದಂತೆ ಹತ್ತಾರು ರಾಮಾಯಣ, ಮಹಾಭಾರತದ ಪೌರಾಣಿಕ ಪ್ರಸಂಗಗಳು, ಛೋಟಾ ಭೀಮ್, ಮೋಟು-ಪಟ್ಲು, ದೋರೆಮಾನ್‍ನಂತಹ ಮಕ್ಕಳನ್ನು ಸೆಳೆಯುವ ನವರಾತ್ರಿ ಗೊಂಬೆಗಳು ಗಮನ ಸೆಳೆಯುತ್ತಿವೆ. ಅ.17 ರಿಂದ ಆರಂಭವಾಗಲಿರುವ ನವರಾತ್ರಿಯ ಹಿನ್ನೆಲೆಯಲ್ಲಿ ನಗರಕ್ಕೆ ಲಗ್ಗೆಯಿಟ್ಟಿರುವ ಗೊಂಬೆಗಳು ಎಲ್ಲರ ಕೇಂದ್ರಿತವಾಗಿವೆ.

ಹಲಸೂರು, ಗಾಂಧಿಬಜಾರ್, ಮಾಗಡಿರಸ್ತೆ, ಆರ್.ಟಿ. ನಗರ, ಕಮರ್ಷಿಯಲ್ ಸ್ಟ್ರೀಟ್, ಜಯನಗರ, ಬಾಣಸವಾಡಿ, ಮಲ್ಲೇಶ್ವರಂ, ಬಸವೇಶ್ವರನಗರ, ಶಿವಾಜಿನಗರ ಹೀಗೆ ನಗರದ ನಾನಾ ಭಾಗಗಳಲ್ಲಿ ಗೊಂಬೆಗಳ ಮಾರಾಟ ಮಳಿಗೆಗಳು ರಾರಾಜಿಸುತ್ತಿವೆ. ಹಳೆಯ ಗೊಂಬೆಗಳ ಜತೆಗೆ ಹೊಸ ಪರಿಕಲ್ಪನೆಯ ಸೆಟ್‍ಗಳೂ ಬಂದಿವೆ.

ಶಂಕರ ಮಠ ಸಿಗ್ನಲ್ ಬಳಿಯಿರುವ ಬೋರಲಿಂಗೇಶ್ವರ ಎಂಟರ್‍ಪ್ರೈಸಸ್ ಗೊಂಬೆ ಮಳಿಗೆಯಲ್ಲಿ ಮಹಾಭಾರತದ 23 ಸೆಟ್‍ಗಳು, ರಾಮಾಯಣದ 30 ಸೆಟ್‍ಗಳು, ಪೇಪರ್ ಮೆಶ್‍ನ ಬಗೆ ಬಗೆಯ ಗೊಂಬೆ ಸೆಟ್‍ಗಳು, ಮಣ್ಣಿನ ಗೊಂಬೆಗಳು ಗಮನ ಸೆಳೆಯುತ್ತಿವೆ. ಗೊಂಬೆಗಳ ಮಾರಾಟ ಮಾಡಲಾಗುತ್ತಿದೆ.

ತಮಿಳುನಾಡು, ಕೋಲ್ಕತ್ತಾದಿಂದ ಗೊಂಬೆಗಳು ಬಂದಿವೆ. ಕಪ್ಪು ಮಣ್ಣಿನಿಂದ ತಯಾರಿಸಿದ ಮಾಯಾವರಂ ಪೇಂಟಿಂಗ್‍ನ ಆಕರ್ಷಕ ಗೊಂಬೆಗಳು ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿವೆ. ಇದೀಗ ಕೊರೋನ ಇರುವುದರಿಂದ ನಮ್ಮ ಮಳಿಗೆಯಲ್ಲಿ ಶೇ.20 ರವರೆಗೆ ರಿಯಾಯಿತಿ ದರದಲ್ಲಿ ಗೊಂಬೆಗಳನ್ನು ಮಾರುತ್ತಿದ್ದೇವೆ ಎಂದು ಬೋರಲಿಂಗೇಶ್ವರ ಎಂಟರ್ ಪ್ರೈಸಸ್ ಗೊಂಬೆ ಮಾರಾಟಗಾರರ ಜಿ.ಬಿ. ಹರೀಶ್ ಮತ್ತು ಸೋದರಿ ಕೆ. ಜ್ಯೋತಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಅಂಗಡಿಗಳಲ್ಲಿ ಪ್ಲಾಸ್ಟರ್‍ ಆಫ್ ಪ್ಯಾರಿಸ್, ಮರ, ಸೆರಾಮಿಕ್, ಗಾಜು, ಪ್ಲಾಸ್ಟಿಕ್, ಪಾಲಿಸ್ಟಿನ್, ಮಾರ್ಬಲ್‍ಡಸ್ಟ್, ಮಣ್ಣಿನ ಗೊಂಬೆಗಳೂ ಹಬ್ಬಕ್ಕಾಗಿ ಸಿದ್ಧಗೊಂಡಿವೆ. ರಾಧೆ-ಕೃಷ್ಣ ಸೇರಿದಂತೆ ಅನೇಕರ ಗೊಂಬೆಗಳಿದ್ದು, ಗೊಂಬೆಗಳನ್ನು ಕೂರಿಸುವ ಸಂಪ್ರದಾಯವುಳ್ಳ ಹಲವರು ತಮ್ಮ ಮನೆಗಳಲ್ಲಿ ಕೂರಿಸಲು ಸಜ್ಜಾಗಿದ್ದಾರೆ. ಎಷ್ಟೇ ದುಬಾರಿ ಬೆಲೆಯ ಸೆಟ್‍ಗಳಿರಲಿ ಆದರೆ ಗೊಂಬೆ ಕೂರಿಸುವ ಸಂಪ್ರದಾಯವುಳ್ಳವರಿಗೆ ಮದುವೆಯಾದಾಗ ಪಟ್ಟದ ಗೊಂಬೆಯನ್ನು ಉಡುಗೊರೆಯಾಗಿ ನೀಡುತ್ತಾರೆ. ಹೀಗಾಗಿ ಗೊಂಬೆಹಬ್ಬದಲ್ಲಿ ಪಟ್ಟದ ಗೊಂಬೆಗೆ ಮೊದಲ ಆದ್ಯತೆಯಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News