ಜೆಪಿ ಪಾರ್ಕ್ ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಾಣ: ಕಾಮಗಾರಿಗೆ ಹೈಕೋರ್ಟ್ ತಡೆ

Update: 2020-10-12 12:11 GMT

ಬೆಂಗಳೂರು, ಅ.12: ನಗರದ ಮತ್ತಿಕೆರೆಯಲ್ಲಿರುವ ಜೆ.ಪಿ.ಪಾರ್ಕ್ ಜಾಗದಲ್ಲಿ ಕೈಗೊಂಡಿರುವ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಜೆಪಿ ಪಾರ್ಕ್ ಜಾಗದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಾಣ ಪ್ರಶ್ನಿಸಿ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪಾರ್ಕ್ ಗೆ ಸೇರಿದ ಆಟದ ಮೈದಾನದಲ್ಲಿ ಮಾರುಕಟ್ಟೆ ನಿರ್ಮಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲರು ಮಾರುಕಟ್ಟೆ ಕಟ್ಟಡವನ್ನು ಜೆಪಿ ಪಾರ್ಕ್ ಜಾಗದಲ್ಲಿ ನಿರ್ಮಿಸುತ್ತಿಲ್ಲ. ಕಟ್ಟಡ ಪಾರ್ಕ್ ನಿಂದ 300 ಮೀಟರ್ ದೂರದಲ್ಲಿದೆ. ಹಾಗೆಯೇ, ಪಾರ್ಕ್‍ಗೆ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ ಎಂದರು. ಟೆಂಡರ್ ನಲ್ಲಿ ಜಾಗವನ್ನು ಜೆಪಿ ಪಾರ್ಕ್ ಎಂದು ನಮೂದಿಸಿರುವ ಕಾರಣ ಪೀಠ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತು. ಹಾಗೆಯೇ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 6ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News