ವರಂಗ ಗ್ರಾಪಂನಲ್ಲಿ ಎಲ್ಲವೂ ತಂತ್ರಜ್ಞಾನಮಯ!

Update: 2020-10-20 07:30 GMT

ಉಡುಪಿ, ಅ.20: ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ. ದೂರದಲ್ಲಿರುವ ಮತ್ತು ಪಶ್ಚಿಮಘಟ್ಟದ ತಪ್ಪಲಿನ ದಟ್ಟವಾದ ಅರಣ್ಯ ಹಾಗೂ ತೀರಾ ಗ್ರಾಮೀಣ ಪ್ರದೇಶದಿಂದ ಕೂಡಿರುವ ವರಂಗ ಗ್ರಾಪಂನಲ್ಲಿ ಎಲ್ಲವೂ ತಂತ್ರಜ್ಞಾನಮಯವಾಗಿದೆ. ನೀರು, ವಿದ್ಯುತ್ ಪೋಲಾಗದಂತೆ ತಡೆ ಯಲು ಆಳವಡಿಸಿಕೊಂಡಿರುವ ತಂತ್ರಜ್ಞಾನದಲ್ಲೂ ಯಶಸ್ಸು ಕಂಡಿದೆ. ಹೆಬ್ರಿ ತಾಲೂಕಿನಲ್ಲಿರುವ ವರಂಗ ಗ್ರಾಮ ಪಂಚಾಯತ್, ಪ್ರಸ್ತುತ 8053 ಜನಸಂಖ್ಯೆ ಹೊಂದಿದೆ. ಅಂಡಾರು, ಪಡುಕುಡೂರು ಮತ್ತು ವರಂಗ ಮೂರು ಕಂದಾಯ ಗ್ರಾಮಗಳನ್ನು ಹೊಂದಿರುವ ಈ ಪಂಚಾಯತ್, 2016, 2017 ಮತ್ತು 2018ನೆ ಸಾಲಿನಲ್ಲಿ ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಆಳವಡಿಕೆ ಮತ್ತು ಮೂಲ ಭೂತ ಸೌಕರ್ಯಗಳ ಆಧುನೀಕರಣಗೊಳಿಸುವ ಮೂಲಕ ಮಾದರಿ ಗ್ರಾಪಂ ಆಗಿ ಮೂಡಿಬಂದಿದೆ.

ಪಂಪ್‌ಗೆ ಮಿಸ್‌ಕಾಲ್ ಸ್ಟಾರ್ಟರ್: ವಾಟರ್ ಟ್ಯಾಂಕ್ ತುಂಬಿ ಕುಡಿಯುವ ನೀರು ಹೊರಗಡೆ ಚೆಲ್ಲಿ ಪೋಲಾ ಗದಂತೆ ತಡೆಯಲು ಈ ಪಂಚಾಯತ್ ವಿಶಿಷ್ಟ ತಂತ್ರಜ್ಞಾನವನ್ನು ಆಳವಡಿಸಿ ಕೊಂಡಿದೆ. ಕೇವಲ ಮೊಬೈಲ್‌ನಲ್ಲಿ ಮಿಸ್‌ಕಾಲ್ ನೀಡುವ ಮೂಲಕ ಎಲ್ಲವನ್ನು ನಿಯಂತ್ರಿಸಬಹುದಾಗಿದೆ. ಕುಡಿಯುವ ನೀರಿನ ಮೋಟಾರಿನ ಸ್ಟಾರ್ಟರ್‌ಗೆ ಸಿಮ್ ಆಳವಡಿಸಲಾಗಿದೆ. ಆ ಸಿಮ್ ನಂಬರಿಗೆ ಮಿಸ್ ಕಾಲ್ ಕೊಟ್ಟರೆ ಪಂಪ್ ಆನ್ ಆಗುತ್ತದೆ. ಆಗ ಆನ್ ಆಗಿರುವ ಬಗ್ಗೆ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಈ ಮಧ್ಯೆ ವಿದ್ಯುತ್ ಕೈಕೊಟ್ಟರೆ ತಕ್ಷಣ ಮೊಬೈಲ್‌ಗೆ ಮೇಸೆಜ್ ಬರುತ್ತದೆ. ಬಳಿಕ ವಿದ್ಯುತ್ ಬಂದಾಗ ಮತ್ತೆ ಮೆಸೇಜ್ ಬರುತ್ತದೆ. ನೀರು ತುಂಬಿರುವ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟರೆ ಬೆಂಗಳೂರಿನಲ್ಲಿದ್ದರೂ ಕೂಡ ಆ ಸಿಮ್ ನಂಬರ್‌ಗೆ ಮಿಸ್ ಕಾಲ್ ಕೊಡುವ ಮೂಲಕ ಪಂಪ್ ಬಂದ್ ಮಾಡಬಹುದಾಗಿದೆ. ಹೀಗೆ ಮೂರು ಗ್ರಾಮಗಳಲ್ಲಿರುವ ಓವರ್‌ಹೆಡ್ ಟ್ಯಾಂಕಿನ ಪಂಪ್‌ಗಳಿಗೂ ಸ್ಟಾರ್ಟರ್ ಆಳವಡಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ತಂತ್ರಜ್ಞಾನ ಬಳಕೆಯು ಯಶಸ್ವಿಯಾಗಿ ಮುಂದುವರೆಯುತ್ತಿದೆ.

ಸ್ವಯಂಚಾಲಿತ ಬೀದಿದೀಪಗಳು: ವಿದ್ಯುತ್ ಉಳಿತಾಯದ ಉದ್ದೇಶದೊಂದಿಗೆ ಗ್ರಾಪಂ ವ್ಯಾಪ್ತಿಯ ಎಲ್ಲ ಬೀದಿ ದೀಪಗಳಿಗೆ ಟೈಮರ್ ಅಳವಡಿಸಲಾಗಿದ್ದು, ಸಂಜೆ 6 ಗಂಟೆಗೆ ಸ್ವಯಂ ಚಾಲಿತ ವಾಗಿ ಉರಿಯುವ ದೀಪಗಳು, ಬೆಳಗ್ಗೆ 6ಗಂಟೆಗೆ ಆಫ್ ಆಗುತ್ತದೆ.

ಗ್ರಾಪಂ ವ್ಯಾಪ್ತಿಯ ಒಟ್ಟು 20 ಲೈನ್‌ಗೆ ಟೈಮರ್ ಆಳವಡಿಸಲಾಗಿದೆ. ಒಂದು ಲೈನ್‌ನಲ್ಲಿ 30-40 ದಾರಿದೀಪಗಳು ಇರುತ್ತವೆ. ಹೀಗೆ ಪಂಚಾಯತ್ ನಲ್ಲಿ ಒಟ್ಟು 350 ದಾರಿದೀಪಗಳಿವೆ. ಈ ರೀತಿ ಟೈಮರ್‌ನಿಂದಾಗಿ ವಿದ್ಯುತ್ ಅಪವ್ಯಯ ತಪ್ಪುತ್ತದೆ.

ಸ್ವಚ್ಚತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಪೇಟೆಯ ಪ್ರಮುಖ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಿ, ಮೊಬೈಲ್ ಮೂಲಕ ಪರಿಶೀಲಿಸುವುದರೊಂದಿಗೆ ತ್ಯಾಜ್ಯ ಎಸೆಯದಂತೆ ಕ್ರಮ ವಹಿಸಲಾಗಿದೆ. ಗ್ರಾಪಂ ಕಚೇರಿ ಸುತ್ತ ವೈಫೈ ವ್ಯವಸ್ಥೆ ಮಾಡಲಾಗಿದ್ದು, ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳುತ್ತಿದ್ದಾರೆ ಎಂದು ಪಿಡಿಓ ಸದಾಶಿವ ಸೇರ್ವೆಗಾರ್ ತಿಳಿಸಿದ್ದಾರೆ.

ನಗದು ರಹಿತ ವ್ಯವಹಾರ: ನಗದು ರಹಿತ ವ್ಯವಹಾರದಲ್ಲೂ ಈ ಗ್ರಾಪಂ ಯಶಸ್ವಿಯಾಗಿದೆ. ಇಲ್ಲಿ ಗ್ರಾಮಸ್ಥರು ಕ್ರೆಡಿಟ್ ಕಾರ್ಡ್ ಮೂಲಕವೇ ತೆರಿಗೆ ಪಾವತಿಸುತ್ತಿದ್ದಾರೆ. ನೀರು ದರವನ್ನು ಕಂಪ್ಯೂಟರ್ ಬಿಲ್ಲಿಂಗ್ ಮೂಲಕ ನೀಡಲಾಗುತ್ತದೆ ಮತ್ತು ವಸೂಲು ಮಾಡಲಾಗುತ್ತಿದೆ. ಯುವ ಪೇ ಆ್ಯಪ್ ಮೂಲಕ ತೆರಿಗೆ ವಸೂಲಾತಿಗೆ ಆ್ಯಪ್ ಬಳಸಲಾಗುತ್ತಿದೆ.

ಇಡೀ ಗ್ರಾಪಂ ಕಟ್ಟಡಕ್ಕೆ ಸೋಲಾರ್ ಅಳವಡಿಸಲಾಗಿದ್ದು, ದೈನಂದಿನ ಎಲ್ಲ ಕಾರ್ಯಗಳು ಸೋಲಾರ್ ಮೂಲಕವೇ ನಿರ್ವಹಿಸಲಾಗುತ್ತಿದೆ. ಇದರಿಂದ ವಿದ್ಯುತ್ ತೊಂದರೆ ನೆಪ ಹೇಳಿ ಸಾರ್ವಜನಿಕರಿಗೆ ದೈನಂದಿನ ಕಾರ್ಯಗಳನ್ನು ವಿಳಂಬಗೊಳಿಸದಂತೆ ಸೂಕ್ತ ಕ್ರಮವಹಿಸಲಾಗಿದೆ. ಕಚೇರಿ ಆವರಣದಲ್ಲಿ ಸಸ್ಯ ತೋಟ ಮತ್ತು ತರಕಾರಿಗಳನ್ನು ಬೆಳಸಲಾಗುತ್ತಿದೆ ಎಂದು ಪಿಡಿಓ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲೇ ಪ್ರಥಮ ಡಿಜಿಟಲ್ ಗ್ರಂಥಾಲಯ!

ಜಿಲ್ಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಹೊಂದಿರುವ ಏಕೈಕ ಗ್ರಾಮ ಪಂಚಾಯತ್ ಎಂಬ ಕೀರ್ತಿಗೆ ವರಂಗ ಗ್ರಾಪಂ ಪಾತ್ರವಾಗಿದೆ. ಗ್ರಾಪಂ ಕಚೇರಿ ಸಮೀಪದ ಸಾರ್ವಜನಿಕ ಗ್ರಂಥಾಲಯ ಕಟ್ಟಡವನ್ನು ಡಿಜಿಟಲೀಕರಣ ಮಾಡಿ ವೈಫೈ ಮೂಲಕ ಓದುಗರಿಗೆ ಪುಸ್ತಕ ಒದಗಿಸಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಆರಂಭಗೊಂಡಿರುವ ಈ ಡಿಜಿಟಲ್ ಗ್ರಂಥಾಲಯದಲ್ಲಿ 2,500 ಗ್ರಂಥಗಳು ಲಭ್ಯ ಇವೆ. ಇದನ್ನು ಓದಲು ಇಂಟರ್‌ನೆಟ್ ಅಗತ್ಯವಿಲ್ಲ. ಮಿಂಟ್ ಬಾಕ್ಸ್‌ನ 100 ಮೀಟರ್ ವ್ಯಾಪ್ತಿಯಲ್ಲಿ ವೈಪೈ ಮೂಲಕ ಪುಸ್ತಕ ಓದಬಹುದಾಗಿದೆ. ಈ ಮಿಂಟ್ ಬಾಕ್ಸ್‌ನ್ನು ಶಾಲೆ, ಕಾಲೇಜ್ ಸೇರಿದಂತೆ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಿ ಆಸಕ್ತರಿಗೆ ಓದಲು ಅವಕಾಶ ಕಲ್ಪಿಸಬಹುದಾಗಿದೆ.

ಗ್ರಾಪಂನಲ್ಲಿಯೇ ಕ್ಯಾಂಟೀನ್

ಗ್ರಾಪಂ ಸಿಬ್ಬಂದಿಗೆ, ಸಭೆಯ ಸಂದರ್ಭದಲ್ಲಿ ಸದಸ್ಯರಿಗೆ, ಅತಿಥಿಗಳಿಗೆ, ಸಾಮಾನ್ಯ ಜನರಿಗೆ ಚಹಾ, ಕಾಫಿಯನ್ನು ಗ್ರಾಪಂನಲ್ಲಿ ತಯಾರಿಸಿ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಇಲ್ಲಿನ ಗ್ರಾಪಂ ಸಿಬ್ಬಂದಿ ದಿನಕ್ಕೊಬ್ಬರಂತೆ ಕಾರ್ಯನಿರ್ವಹಿಸುತ್ತಾರೆ. ಉಪಹಾರಗಳಿಗಾಗಿ ಹೊಟೇಲ್‌ಗಳಿಗೆ ಹೋಗುವುದು, ಕಾಲಹರಣ ಮಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಯಾವುದೇ ಸಂದರ್ಭದಲ್ಲೂ ಗ್ರಾಮಸ್ಥರು ಕಚೇರಿಗೆ ಬಂದಾಗ ಸಿಬ್ಬಂದಿ ಕಚೇರಿಯಲ್ಲಿ ಲಭ್ಯ ಇರುತ್ತಾರೆ ಎಂದು ಪಿಡಿಒ ಸದಾಶಿವ ಸೆರ್ವೇಗಾರ್ ತಿಳಿಸಿದ್ದಾರೆ.

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News