ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ: ನೀರಿನಲ್ಲಿ ಕೊಚ್ಚಿ ಹೋದ ವಾಹನಗಳು

Update: 2020-10-23 16:03 GMT

ಬೆಂಗಳೂರು, ಅ.23: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಆರಂಭವಾಗಿರುವ ಬಿರುಸಿನ ಮಳೆ ಶನಿವಾರವೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಮುಂಜಾನೆಯಿಂದ ಆರಂಭವಾದ ಮಳೆ ರಾತ್ರಿವರೆಗೂ ಸುರಿಯಿತು. ನಗರದ ವಿಧಾನಸೌಧ, ಕೆ.ಆರ್.ವೃತ್ತ, ಲಾಲ್ ಬಾಗ್ ರಸ್ತೆ, ಕೆಂಗಲ್ ಹನುಮಂತಯ್ಯ ರಸ್ತೆ, ಜಯನಗರ, ಜೆ.ಪಿ.ನಗರ, ಮೆಜೆಸ್ಟಿಕ್, ಸಿಟಿ ಮಾರುಕಟ್ಟೆ ಸೇರಿದಂತೆ ಬಹುತೇಕ ಕಡೆ ಧಾರಾಕಾರ ಮಳೆ ಸುರಿದಿದ್ದು, ಇದರ ಪರಿಣಾಮ ರಸ್ತೆ, ಕೆಳ ಸೇತುವೆ ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಜನರು ಅನುಭವಿಸಿದರು.

ಇಲ್ಲಿನ ಹೊಸಕೆರೆಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ಪಕ್ಕದ ರಸ್ತೆಯಲ್ಲಿಯೂ ರಭಸದಿಂದ ನೀರು ಹರಿಯತೊಡಗಿದೆ. ಇದರ ಪರಿಣಾಮ ಆಟೊ, ಕಾರು ಸೇರಿದಂತೆ ಇನ್ನಿತರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಇನ್ನು, ನಗರದ ಕೆಲ ಮುಖ್ಯ ರಸ್ತೆಗಳು ಕೂಡಾ ಜಲಾವೃತವಾಗಿದ್ದು, ಮೆಟ್ರೋ ಕಾಮಗಾರಿಗೆ ಹಾಕಿದ್ದ ಬ್ಯಾರಿಕೇಡ್‍ಗಳು ರಸ್ತೆಗೆ ಬಿದ್ದಿವೆ. ನಗರದ ಜೆ.ಸಿ.ರಸ್ತೆಯಲ್ಲಿದ್ದ ಕೆಲ ವಾಹನಗಳೂ ಸಹ ನೀರಿನಲ್ಲಿ ಮುಳುಗಿದ್ದು, ಚರಂಡಿ ವ್ಯವಸ್ಥಿತವಾಗಿಲ್ಲದ ಕಾರಣ ಕಾಲುವೆ ನೀರೆಲ್ಲವೂ ರಸ್ತೆಯಲ್ಲಿ ನಿಂತಿತ್ತು.

ಅದೇ ರೀತಿ, ವರುಣನ ಆರ್ಭಟಕ್ಕೆ ನಗರದ ಗವಿಗಂಗಾಧರೇಶ್ವರ ದೇವಸ್ಥಾನದ ಗೋಡೆ ಕುಸಿದಿರುವುದು ವರದಿಯಾಗಿದೆ. ಇದರ ಹೊರತು ಇದುವರೆಗೆ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News