ಕಂದಾವರ ರಸ್ತೆ ಕಾಮಗಾರಿಗೆ ಮಾಜಿ ಶಾಸಕ ಮೊಯ್ದಿನ್ ಬಾವ ಚಾಲನೆ
ಮಂಗಳೂರು, ಅ.26: ತಾಲೂಕಿನ ಕಂದಾವರ ಗ್ರಾಪಂ ವ್ಯಾಪ್ತಿಯ ಕಂದಾವರ ಚರ್ಚ್ ಹಿಂಬದಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಶಾಸಕ ಮೊಯ್ದಿನ್ ಬಾವ ಸೋಮವಾರ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಾನು ಶಾಸಕನಾಗಿದ್ದಾಗ ಸರಕಾರದಿಂದ ಬಿಡುಗಡೆಗೊಂಡಿದ್ದ ಅನೇಕ ಅನುದಾನ ವನ್ನು ಹಾಲಿ ಶಾಸಕರು ಅವರಿಷ್ಟವಾದ ಪಂಚಾಯತ್‌ಗಳಿಗೆ ಶಿಫ್ಟ್ ಮಾಡುತ್ತಿದ್ದಾರೆ. ಅವರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ಪಂಚಾಯತ್‌ಗಳ ಬದಲಿಗೆ ಒಂದೆರಡು ಪಂಚಾಯತ್‌ಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಬಿಟ್ಟು, ಕ್ಷೇತ್ರದ ಅಭಿವೃದ್ಧಿ ನಡೆಸಬೇಕು. ಕಂದಾವರ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ನಕಲಿ ಅಥವಾ ಝೆರಾಕ್ಸ್ ಹಕ್ಕುಪತ್ರ ನೀಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.
ಕಂದಾವರ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಮಾತನಾಡಿ, ವಸತಿ ಯೋಜನೆ ಕೈಗೊಂಡ ಬಳಿಕ ಫಲಾನುಭವಿ ಗಳಿಗೆ ಹಕ್ಕುಪತ್ರದ ಮೂಲಪ್ರತಿ ನೀಡಲು ಉದ್ದೇಶಿಸಿದ್ದೆವು. ಹಕ್ಕುಪತ್ರಗಳ ಮೂಲಪ್ರತಿ ಪಂಚಾಯತ್‌ನಲ್ಲೇ ಇದ್ದು, ಅವುಗಳನ್ನು ಶಾಸಕರು ಯಾವಾಗ ಬೇಕಿದ್ದರೂ ಬಟವಾಡೆ ಮಾಡಬಹುದು. ಬದಲಾಗಿ, ಈ ವಿಷಯದಲ್ಲಿ ಜನರಿಗೆ ಸುಳ್ಳು ಮಾಹಿತಿ ನೀಡುವ ಅಗತ್ಯವಿಲ್ಲ ಎಂದರು.
ಜಿಪಂ ಸದಸ್ಯ ಯು.ಪಿ. ಇಬ್ರಾಹಿಂ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಸೇರಿ ಕ್ಷೇತ್ರದ ಒಟ್ಟು ಅಭಿವೃದ್ಧಿಗೆ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ದೇವೇಂದ್ರ, ಇಂಟಕ್ ಮುಖಂಡ ಸಂಪತ್ ಲೋಬೊ, ಕಾಂಗ್ರೆಸ್ ಪ್ರಮುಖರಾದ ಹೆರಾಲ್ಡ್ ಲೋಬೊ, ಅದ್ರ ಮೋನು(ಅದ್ದ), ಬೂಬ ಪೂಜಾರಿ, ವೀಣಾ ಡಿಸೋಜ, ಸುಜಾತಾ ಎಸ್. ಭಂಡಾರಿ, ಹರೀಶ್ ಕುಮಾರ್, ಜಾನ್ ಲೋಬೊ, ಸ್ಟಾನಿ ಫೆರ್ನಾಂಡೀಸ್, ವಿಮಲಾ, ಕವಿತಾ, ಸಂದೇಶ್ ಲೋಬೊ, ಸಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.