ಯುವತಿ ಮೊಗದಲ್ಲಿ ಮೂಡಿದ ಸಿಂಹ ! : ಸೌಂದರ್ಯ ಕಲಾವಿದೆ ಚೇತನಾ ಕೈಚಳಕಕ್ಕೆ ವ್ಯಾಪಕ ಶ್ಲಾಘನೆ

Update: 2020-10-29 11:59 GMT

ಮಂಗಳೂರು, ಅ.29: ನವರಾತ್ರಿಯ ವಿಶೇಷವಾಗಿ ನಗರದ ಸೌಂದರ್ಯ ಕಲಾವಿದೆ ಚೇತನಾ ಎಸ್.ರವರು ಯುವತಿಯ ಮುಖದಲ್ಲಿ ರಚಿಸಿದ ಸಿಂಹದ ಚಿತ್ರ ಇದೀಗ ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ.

ನಗರದ ಚೇತನಾ ಬ್ಯೂಟಿ ಲಾಂಜ್ ಆ್ಯಂಡ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಚೇತನಾ ಎಸ್. ತಮ್ಮ ಶಿಷ್ಯೆಯಾದ ಶ್ರೇಯಾ ಎಂ. ಭಟ್ ಎಂಬವರ ಮುಖ ಹಾಗೂ ಕೂದಲನ್ನು ಉಪಯೋಗಿಸಿಕೊಂಡು ಚಿತ್ರಿಸಿರುವ ಸಿಂಹದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.
ನವರಾತ್ರಿಯ ಸಂದರ್ಭ ಪೂಜಿಸಲ್ಪಡುವ ದುರ್ಗಾ ಮಾತೆಯ ವಾಹನವಾಗಿರುವ ಸಿಂಹದ ಮುಖದ ಚಿತ್ರವನ್ನು ಯುವತಿಯ ಮುಖದಲ್ಲಿ ಮೂಡಿಸಲಾಗಿದ್ದು, ಸುಮಾರು ಐದು ಗಂಟೆಗಳ ಅವಧಿಯಲ್ಲಿ ತಮ್ಮ ಕಲಾತ್ಮಕ ಕೈಚಳಕವನ್ನು ಚೇತನಾ ಹೊರಗೆಡಹಿದ್ದಾರೆ. ಇವರ ಈ ಕಲೆಯನ್ನು ಛಾಯಾಚಿತ್ರಗ್ರಾಹಕ ವಿವೇಕ್ ಸಿಕ್ವೇರಾ ಸೆರೆ ಹಿಡಿದಿದ್ದಾರೆ.

ವಿಶೇಷವೆಂದರೆ ಈ ಕಲೆಯಲ್ಲಿ ಸಿಂಹದ ಮುಖವನ್ನು ನೈಜವಾಗಿ ಚಿತ್ರಿಸಲು ಯಾವುದೇ ರೀತಿಯ ಕೃತಕ ಕೂದಲನ್ನು ಬಳಸಿಲ್ಲ. ವಿದೇಶಗಳಲ್ಲಿ ಈ ರೀತಿ ದೇಹದ ಮೇಲೆ ಪ್ರಾಣಿ ಪಕ್ಷಿ ಸೇರಿದಂತೆ ನಾನಾ ರೀತಿಯ ಪೇಯ್ಟಿಂಗ್ ಮಾಡುವಂತಹ ಕಲಾತ್ಮಕತೆಯನ್ನು ನಾವು ನೋಡುತ್ತಿ ರುತ್ತೇವೆ. ಆದರೆ ಅಪರೂಪದ ಫೇಸ್ ಪೇಯ್ಟಿಂಗ್ ಎಂದೇ ಕರೆಯಲ್ಪಡುವ ಈ ಕಲೆಯಲ್ಲಿ ಚೇತನಾ ಅವರು ಪ್ರಥಮ ಪ್ರಯತ್ನದಲ್ಲೇ ಸೈ ಅನ್ನಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌಂದರ್ಯ, ರೂಪದರ್ಶಿ ತರಬೇತುದಾರರಾಗಿರುವ ಚೇತನಾ ತಮ್ಮ ಶಿಷ್ಯೆಯಾದ ಶ್ರೇಯಾ ಅವರ ಮುಖದ ಮೇಲೆ ಈ ಪ್ರಯೋಗ ಮಾಡಿದ್ದಾರೆ. ಕಾಲೇಜಿನಲ್ಲಿ ಹವ್ಯಾಸವಾಗಿ ಬ್ಯೂಟಿಶಿಯನ್ ಕಲೆಯನ್ನು ಕಲಿತುಕೊಂಡ ಚೇತನಾ ಬಿಎ (ಮನಶಾಸ್ತ್ರ) ಪದವೀಧರೆ. ಮೇಕಪ್ ಆರ್ಟ್, ಮೆಹೆಂದಿ ವಿನ್ಯಾಸದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ಅದನ್ನೇ ತಮ್ಮ ವೃತ್ತಿಯನ್ನಾಗಿಸಿದವರು. ಏನಾದರೂ ಹೊಸತನವನ್ನು ಮಾಡಬೇಕೆಂಬ ನಿಟ್ಟಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ಸಿಂಹದ ಮುಖವನ್ನು ಯುವತಿಯ ಮುಖದಲ್ಲಿ ಚಿತ್ರಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

‘‘ಈ ಚಿತ್ರದ ಕಲ್ಪನೆ ಕಳೆದ ಹಲವಾರು ತಿಂಗಳಿನಿಂದ ನನ್ನ ಮನದಲ್ಲಿ ಮೂಡುತ್ತಿತ್ತು. ಆದರೆ ಧೈರ್ಯ ಮಾಡಿರಲಿಲ್ಲ. ಆದರೆ ನವರಾತ್ರಿಯ ಸಂದರ್ಭ ಏನಾದರೂ ವಿಶೇಷ ಮಾಡಬೇಕೆಂಬ ಹುಮ್ಮಸ್ಸಿನೊಂದಿಗೆ ಈ ಕಾರ್ಯಕ್ಕೆ ಮುಂದಾದೆ. ಅ. 24ರಂದು ಸುಮಾರು 5 ಗಂಟೆಗಳ ಅವಧಿಯಲ್ಲಿ ಈ ಸಿಂಹದ ಮುಖವನ್ನು ಶ್ರೇಯಾ ಮುಖದ ಮೇಲೆ ಬಿಡಿಸಿದ್ದೇನೆ. ನೈಜತೆಯನ್ನು ಕಾಪಾಡುವ ದೃಷ್ಟಿಯಿಂದ ಆಕೆಯ ಕೂದಲನ್ನೇ ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಿದ್ದೇನೆ. ಆಕೆಯ ಕಣ್ಣುಗಳನ್ನು ಮುಚ್ಚಿ, ಕಣ್ಣಿನ ಹುಬ್ಬುಗಳಿಗೆ ವ್ಯಾಕ್ಸ್ ಹಚ್ಚಿ ಅದರ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಲಾಗಿದೆ. ನನಗೆ ಇದೊಂದು ಹೊಸ ಅನುಭವ. ಕಲಾಪ್ರಿಯ ನೋಡುಗರು ಇದನ್ನು ಇಷ್ಟಪಟ್ಟಿರುವುದು ಖುಷಿ ನೀಡಿದೆ’’


- ಚೇತನಾ ಎಸ್., ಸೌಂದರ್ಯ ಕಲಾವಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News