ಮಲಾರ್ ನಲ್ಲಿ ವೃದ್ಧ ವ್ಯಕ್ತಿಯ ಹತ್ಯೆ ಪ್ರಕರಣ : ನಾಲ್ವರ ಬಂಧನ

Update: 2020-11-02 15:29 GMT
ಪಲ್ಲಿಯಬ್ಬ

ಮಂಗಳೂರು, ನ.2: ಮಲಾರ್ ಗ್ರಾಮದ ವೃದ್ಧರೊಬ್ಬರನ್ನು ಹತ್ಯೆಗೈದು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಲಾರ್ ಅಕ್ಷರನಗರ ನಿವಾಸಿ ಹಂಝ ಅಬ್ಬಾಸ್ (44), ಮಲಾರ್ ಅರಸ್ತಾನ ಸೈಟ್ ನಿವಾಸಿ ಅಝರುದ್ದೀನ್ (27), ಸಜಿಪನಡು ಕಂಚಿನಡ್ಕಪದವು ನಿವಾಸಿಗಳಾದ ಅಮೀರ್ ಶೇಖ್ ಯಾನೆ ಅಮ್ಮಿ (26), ಅರ್ಫಾಝ್ ಅಬ್ದುಲ್ ರಝಾಕ್ (20) ಬಂಧಿತ ಆರೋಪಿಗಳು.

ಪ್ರಕರಣ ವಿವರ: ಪಾವೂರು ಗ್ರಾಮದ ಮಲಾರ್‌ನಿಂದ ಪಲ್ಲಿಯಬ್ಬ ಯಾನೆ ಪಲ್ಲಿಯಾಕ ನಾಪತ್ತೆಯಾದ ಬಗ್ಗೆ ಅ.29ರಂದು ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಬಳಿಕ ಪಲ್ಲಿಯಬ್ಬ ಎಂಬವರ ಮೃತದೇಹವು ಇರಾ ಗ್ರಾಮದ ಪದವು ಬಳಿ ಹೂತಿಟ್ಟ ಸ್ಥಿತಿಯಲ್ಲಿ ರವಿವಾರ ಪತ್ತೆಯಾಗಿತ್ತು. ಹಣದ ವಿಚಾರದಲ್ಲಿ ಇವರನ್ನು ವ್ಯವಸ್ಥಿತವಾಗಿ ಹತ್ಯೆಗೈದು ಹೂತು ಹಾಕಲಾಗಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News