ರಕ್ಷಿತಾ ನಾಯಕ್ ಸಾವಿನ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ
Update: 2020-11-02 16:36 GMT
ಉಡುಪಿ, ನ.1: ಕುಕ್ಕೆಹಳ್ಳಿಯ ರಕ್ಷಿತಾ ನಾಯಕ್(19) ಸಂಶಯಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಜಡ್ಕಲ್ ಮೂಲದ ಪ್ರಶಾಂತ್ ಕುಂದರ್ (24)ಗೆ ಉಡುಪಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ರಕ್ಷಿತಾಳ ಮೇಲೆ ಅತ್ಯಾಚಾರ, ಬಲತ್ಕಾರದ ಗರ್ಭಪಾತ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ದೂರಿನ ಹಿನ್ನೆಲೆಯಲ್ಲಿ ಅ.31ರಂದು ಪ್ರಶಾಂತ್‌ನನ್ನು ಪೊಲೀಸರು ಬಂಧಿಸಿ, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು, ಆತನಿಗೆ ಹಲವು ಮಾಹಿತಿ ಗಳನ್ನು ಕಲೆ ಹಾಕಿದ್ದರೆನ್ನಲಾಗಿದೆ.
ಇದೀಗ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.