ಆರ್.ಆರ್.ನಗರ, ಶಿರಾ ಉಪಚುನಾವಣೆ: ಮತದಾನ ಬಿರುಸು

Update: 2020-11-03 05:32 GMT
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಜ್ಞಾನಭಾರತಿ ವಾರ್ಡ್‌ನ ಮಲ್ಲತ್ತಹಳ್ಳಿಯ ಕನ್ಯಾಕುಮಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಬೆಂಗಳೂರು/ತುಮಕೂರು ನ.3: ಬೆಂಗಳೂರಿನ ಆರ್.ಆರ್. ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಆರಂಭಗೊಂಡಿದ್ದು, ಕೊರೋನ ಹಿನ್ನೆಲೆಯಲ್ಲಿ ಮತದಾರರರು ಎಚ್ಚರಿಕೆಯಿಂದ ಮತಗಟ್ಟೆಯತ್ತ ಧಾವಿಸಿ ಹಕ್ಕು ಚಲಾಯಿಸುತ್ತಿದ್ದಾರೆ. ಸರಕ್ಷಿತ ಅಂತರ ಕಾಯ್ದುಕೊಂಡು ಕೆಲವು ಮತಗಟ್ಟೆಗಳಲ್ಲಿ ಬೆಳಗ್ಗೆಯೇ ಮತದಾರರ ಸರದಿ ಸಾಲು ಕಂಡುಬಂದಿದೆ.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್. ಅವರು ಕುಟುಂಬದ ಸದಸ್ಯರ ಜತೆ ಆಗಮಿಸಿ ಜ್ಞಾನಭಾರತಿ ವಾರ್ಡ್‌ನ ಮಲ್ಲತ್ತಹಳ್ಳಿಯ ಕನ್ಯಾಕುಮಾರಿ ಪ್ರೌಢಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 304-ಎಯಲ್ಲಿ ಬೆಳಗ್ಗೆ ಮತದಾನ ಮಾಡಿದರು. ಇದಕ್ಕೂ ಮೊದಲು ಅವರು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಕಾಲಭೈರವ ಹಾಗೂ ಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. 

ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಬೆಳಗ್ಗೆ 10:30ರ ವೇಳೆಗೆ ಶೇ.30ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. 

ಇಂದು ಬೆಳಗ್ಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಶಿರಾ ನಗರದ ಜ್ಯೋತಿ ನಗರದ  ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ 10:30ರ ಸುಮಾರಿಗೆ ಜ್ಯೋತಿ ನಗರದ ಸರಕಾರಿ ಪದವಿ ಕಾಲೇಜು ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಹುಲಿಕುಂಟೆ ಹೋಬಳಿ ಚಿರತೆಹಳ್ಳಿ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಹಕ್ಕು ಚಲಾಯಿಸಿದರು.

ಶಿರಾ ಕ್ಷೇತ್ರವ್ಯಾಪ್ತಿಯ ತಾವರೆಕೆರೆ ಮತಗಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಶಿವಕುಮಾರ್ ಎಂಬವರು ಕಳೆದ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಆರಂಭಿಸಿದ 'ಅನ್ನಭಾಗ್ಯ ಯೋಜನೆ'ಯನ್ನು ಮತದಾರರಿಗೆ ನೆನಪಿಸುವ ಉದ್ದೇಶದಿಂದ 'ಅನ್ನಭಾಗ್ಯ'ದ ಅಕ್ಕಿಯನ್ನು ಮೊರದಲ್ಲಿ ಇಟ್ಟುಕೊಂಡು ಮತ ಯಾಚಿಸುತ್ತಿರುವುದು ಕಂಡುಬಂದಿದೆ.

ಬಿಗು ಪೊಲೀಸ್ ಬಂದೋಬಸ್ತ್‌ನಲ್ಲಿ ಮತದಾನ ನಡೆಯುತ್ತಿದ್ದು, ಪ್ರತೀ ಮತಗಟ್ಟೆಯಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗೆ ಮಾಸ್ಕ್, ಕೈಗವಚ ಒದಗಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಪಿಪಿಇ ಕಿಟ್, ಸ್ಯಾನಿಟೈಸರ್ ವ್ಯವಸ್ಥೆ ಇದೆ. ಕೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಅದರಲ್ಲಿ 82 ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ.

ಈ ನಡುವೆ ಕೊರೋನ ಸೋಂಕಿತರಿಗೆ ಸಂಜೆ 5ರಿಂದ 6ರವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News