ಉಡುಪಿ: ಜಿಲ್ಲೆಯ ಐವರು ರಂಗಕರ್ಮಿಗಳಿಗೆ ವಿಶ್ವರಂಗ ಪುರಸ್ಕಾರ

Update: 2020-11-03 13:01 GMT
ಶ್ರೀನಿವಾಸ ಶೆಟ್ಟಿಗಾರ್, ಮಾಧವಿ ಭಂಡಾರಿ, ಅಭಿಲಾಷಾ, ಜಯರಾಮ ನೀಲಾವರ, ರಾಜಗೋಪಾಲ್ ಶೇಟ್

ಉಡುಪಿ, ನ.3: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಐವರು ಖ್ಯಾತ ರಂಗಕರ್ಮಿಗಳನ್ನು ಈ ಬಾರಿಯ ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಖ್ಯಾತ ರಂಗನಟರಾದ ಶ್ರೀನಿವಾಸ ಶೆಟ್ಟಿಗಾರ್, ರಾಜಗೋಪಾಲ್ ಶೇಟ್, ರಂಗ ಕರ್ಮಿಗಳಾದ ಡಾ.ಮಾಧವಿ ಭಂಡಾರಿ, ಜಯರಾಮ ನೀಲಾವರ ಹಾಗೂ ಅಭಿಲಾಷಾ ಎಸ್. ಇವರಿಗೆ ಈ ಬಾರಿಯ ಮಲಬಾರ್ ವಿಶ್ವರಂಗ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭ ಇದೇ ನ.8ರ ರವಿವಾರ ಸಂಜೆ 5:00ಗಂಟೆಗೆ ನಗರದ ಗೀತಾಂಜಲಿ ಬಳಿ ಇರುವ ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್ ಸಂಕೀರ್ಣದಲ್ಲಿ ನಡೆಯಲಿದೆ.

ಸಮಾರಂಭದ ಸಭಾಧ್ಯಕ್ಷತೆಯನ್ನು ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಮಹಾ ಪ್ರಬಂಧಕರಾದ ಇಂದ್ರಾಳಿ ಜಯಕರ ಶೆಟ್ಟಿ ವಹಿಸಲಿದ್ದು, ಅತಿಥಿಗಳಾಗಿ ಮಣಿಪಾಲ ಮಾಹೆಯ ಡಾ. ನೀತಾ ಇನಾಂದಾರ್ ಹಾಗೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರ್ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕಥಾ ಸಪ್ತಾಹದ ಸಂದರ್ಭ ಆಯೋಜಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಎಂಟು ಗಂಟೆಗೆ ಸಾಧನಾ ಸಂಸ್ಕೃತಿ ಅಭಿಯಾನ ಮಾಲಿಕೆಯಲ್ಲಿ ರಾಜೇಶ್ ಭಟ್ ಪಣಿಯಾಡಿ ಅವರ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಸಾಕ್ಷ್ಯಚಿತ್ರ ‘ಸಂಸ್ಕೃತಿ ವಿಶ್ವ’ವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News