ಅಕ್ರಮ ಮರಳುಗಾರಿಕೆ, ಅನಧಿಕೃತ ಕೋರೆ ಕಂಡುಬಂದಲ್ಲಿ ಪಿಡಿಒ, ವಿಎ ವಿರುದ್ಧ ಕ್ರಿಮಿನಲ್ ಕೇಸು
ಮೂಡುಬಿದಿರೆ, ನ.3: ಇರುವೈಲು ಪ್ರದೇಶದಲ್ಲಿ ಅಕ್ರಮ ಮರಗಳುಗಾರಿಕೆ ನಡೆಯುತ್ತಿದೆ. ಕೆಲವೊಂದು ಪಂಚಾಯತ್ ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ಅನಧಿಕೃತ ಕೋರೆಗಳು ಕಾರ್ಯಾಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಾನೇ ಖುದ್ದು ದಾಳಿ ನಡೆಸಿ ಅಕ್ರಮ ಕೋರೆ ನಡೆಸುವವರು ಮಾತ್ರವಲ್ಲ ಸಂಬಂಧಪಟ್ಟ ಪಂಚಾಯತ್ ವ್ಯಾಪ್ತಿಯ ಪಿಡಿಒ ಹಾಗೂ ಗ್ರಾಮ ಕರಣಿಕರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಎಚ್ಚರಿಕೆ ನೀಡಿದ್ದಾರೆ.
ಅವರು ಮಂಗಳವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಅಗತ್ಯವಿರುವ ಗ್ರಾಪಂ ಕಚೇರಿ, ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತವಾದ ಜಾಗವನ್ನು ಪಿಡಿಒ ಹಾಗೂ ಗ್ರಾಮ ಕರಣಿಕರು ಪರಸ್ಪರ ಸಮನ್ವಯದೊಂದಿಗೆ ವಾರದೊಳಗೆ ಗುರುತಿಸಿ ವರದಿ ನೀಡಬೇಕು. ರಕ್ಷಿತಾರಣ್ಯದ ಸಮಸ್ಯೆಗಳಿದ್ದಲ್ಲಿ ಅರಣ್ಯ ಇಲಾಖೆಯವರು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ತೊಡಕುಗಳನ್ನು ನಿವಾರಿಸಿಕೊಡುವಂತೆ ಸೂಚಿಸಿದರು.
ಮೂಡುಬಿದಿರೆಯ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಮಾತನಾಡಿ, ಅಕ್ರಮ ಕಸಾಯಿಖಾನೆ, ಡ್ರಗ್ಸ್, ರಸ್ತೆ ಅಪಘಾತಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು.
ಕುಡಿಯುವ ನೀರಿಗಾಗಿ ಕೊರೆದ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಹೊಸ ಟ್ರಾನ್ಸ್‌ಫರ್‌ಮರ್‌ಗಳಿಗೆ ಪಂಚಾಯತ್‌ಗಳಲ್ಲಿ ಅನುದಾನದ ಕೊರತೆ ಇದೆ ಎಂದು ಪಿಡಿಒಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಕುರಿತು ಮೆಸ್ಕಾಂ ಎಂ.ಡಿ. ಜೊತೆ ಸಮಾಲೋಚಿಸುವುದಾಗಿ ಡಿಸಿ ತಿಳಿಸಿದರು.
ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಸ್ಥಗಿತವಾಗಿರುವ ವಿಷಯ ಸಭೆಯಲ್ಲಿ ಕೇಳಿಬಂತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭಾ ಮುಖ್ಯಾಧಿಕಾರಿ ಇಂದೂ ಎಂ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿಳಂಬವಾಗುತ್ತಿದೆ ಎಂದು ತಿಳಿಸಿದರು. ಈ ಬಗ್ಗೆ ಪ್ರತ್ಯೇಕ ಸಮಾಲೋಚನಾ ಭೆ ನಡೆಸುವುದಾಗಿ ಡಿಸಿ ತಿಳಿಸಿದರು.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ತಾಪಂ ಅಧ್ಯಕ್ಷೆ ರೇಖಾ ಸಾಲ್ಯಾನ್, ಜಿಪಂ ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಾಯ್ಲಸ್ ಡಿಕೋಸ್ತ, ಎಪಿಎಂಸಿ ಅಧ್ಯಕ್ಷ ಕೆ. ಕೃಷ್ಣರಾಜ್ ಹೆಗ್ಡೆ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ದಯಾವತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.